ರಾಜ್ಯ ಸರಕಾರದ 5ನೇ ಯೋಜನೆ ಯುವನಿಧಿಗೆ ಸಿಎಂ ಚಾಲನೆ-ಇಂದಿನಿಂದ ನೋಂದಣಿ ಪ್ರಕ್ರಿಯೆ ಆರಂಭ

ಮಂಗಳೂರು(ಬೆಂಗಳೂರು): ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಚುನಾವಣಾ ಪ್ರಣಾಳಿಕೆಯಂತೆ 5ನೇ ಗ್ಯಾರಂಟಿ ಯುವನಿಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.26ರಂದು ಚಾಲನೆ ನೀಡಿದ್ದು, ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಮತ್ತು ಗಣ್ಯರು, ಓರ್ವ ಯುವತಿ ಹಾಗೂ ಯುವಕನನ್ನು ವೇದಿಕೆಗೆ ಬರಮಾಡಿಕೊಂಡು ಜ್ಯೋತಿ ಬೆಳಗುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಇದೇ ವೇಳೆ ಯೋಜನೆಯ ಲೋಗೋವನ್ನು ಸಿಎಂ ಬಿಡುಗಡೆಗೊಳಿಸಿದರೆ, ಯುವನಿಧಿ ಯೋಜನೆಯ ಪೋಸ್ಟರ್ ಅನ್ನು ಸಿಎಂ ಹಾಗೂ ಡಿಸಿಎಂ ಬಿಡುಗಡೆ ಮಾಡಿದರು.

ಈ ಯೋಜನೆಯಲ್ಲಿ ಯುವ ನಿರುದ್ಯೋಗಿಗಳಿಗೆ ಕೆಲಸ ಸಿಗುವವರೆಗೆ 3 ಸಾವಿರ ಲಭ್ಯವಾಗಲಿದೆ. 2022-23ನೇ ಸಾಲಿನಲ್ಲಿ ಪದವಿ, ಡಿಪ್ಲೊಮಾ ತೇರ್ಗಡೆ ಆಗಿ 6 ತಿಂಗಳಿಂದ ಉದ್ಯೋಗ ಸಿಗದೆ ಇರುವವರಿಗೆ ಯುವನಿಧಿ ಯೋಜನೆಯ ಲಾಭ ಸಿಗಲಿದೆ. ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಸೇರಿದಂತೆ ಇತರ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳಲು ಯಾವುದೇ ಶುಲ್ಕ ಇರುವುದಿಲ್ಲ.

ಯೋಜನೆ ಮೂಲಕ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ರೂ. ನಿಗದಿ ಮಾಡಿದ್ದರೆ, ಡಿಪ್ಲೊಮಾ ಪಾಸ್ ನಿರುದ್ಯೋಗಿಗಳಿಗೆ ಮಾಸಿಕ 1500 ರೂ. ಸಿಗಲಿದೆ. ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ಅವಧಿಗೆ ನಿರುದ್ಯೋಗಿ ಯುವಕರಿಗೆ ಮಾತ್ರ ನೀಡಲಾಗುತ್ತದೆ. ಫಲಾನುಭವಿಯು 2 ವರ್ಷಗಳ ನಂತರ ಅಥವಾ 2 ವರ್ಷಗಳ ಅವಧಿಯಲ್ಲಿ ಉದ್ಯೋಗವನ್ನು ಕಂಡುಕೊಂಡರೆ ನಿರುದ್ಯೋಗ ಭತ್ಯೆಯನ್ನು ನಿಲ್ಲಿಸಲಾಗುತ್ತದೆ.

ಯಾರು ಅರ್ಹರು:
* 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದು 6 ತಿಂಗಳು ಪೂರೈಸಿರಬೇಕು.
* ಉನ್ನತ ಶಿಕ್ಷಣ ವ್ಯಾಸಂಗ ಅಥವಾ ಯಾವುದೇ ಉದ್ಯೋಗಕ್ಕೆ ಸೇರದೇ ಇರುವವರು ಅರ್ಜಿ ಸಲ್ಲಿಸಬಹುದು.
* ಪದವಿ ಹೊಂದಿರುವವರಿಗೆ ಮತ್ತು ಡಿಪ್ಲೊಮಾ ತೇರ್ಗಡೆ ಆದವರಿಗೆ ಈ ಯೋಜನೆ ಅನ್ವಯಿಸಲಿದೆ.

ಬೇಕಾದ ದಾಖಲೆಗಳು:
* ಯುವನಿಧಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಕರ್ನಾಟಕದವರಾಗಿರಬೇಕು.
* ಕರ್ನಾಟಕದ ನಿವಾಸಿಯಾಗಿರುವ ಬಗ್ಗೆ ಸೂಕ್ತ ದಾಖಲೆ ಇರಬೇಕು. ಹತ್ತನೇ ತರಗತಿ, ದ್ವಿತೀಯ ಪಿಯುಸಿ ಹಾಗೂ ಪದವಿ ಅಂಕಪಟ್ಟಿ, ಆಧಾರ್‌ ಕಾರ್ಡ್‌, ಜಾತಿ ಪ್ರಮಾಣ ಪತ್ರ ಬ್ಯಾಂಕ್ ಖಾತೆ ವಿವರ, ಆದಾಯ ಪ್ರಮಾಣಪತ್ರ ದಾಖಲೆಯನ್ನೊಳಗೊಂಡ ಸ್ವಯಂ ಘೋಷಣಾ ಪ್ರತಿಯನ್ನು ಸಲ್ಲಿಸಬೇಕು.

ಇವರು ಅರ್ಹರಲ್ಲ:
* ಉನ್ನತ ವ್ಯಾಸಂಗಕ್ಕೆ ವಿದ್ಯಾಭ್ಯಾಸ ಮುಂದುವರಿಸುವವರಿಗೆ, ವೇತನ ಭತ್ಯೆ ಪಡೆಯುತ್ತಿರುವವರು
* ಸರಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವವರಿಗೆ ಯೋಜನೆ ಅನ್ವಯವಾಗುವುದಿಲ್ಲ.
* ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರಿಗೆ ಯೋಜನೆಯ ಫಲ ಸಿಗುವುದಿಲ್ಲ.

LEAVE A REPLY

Please enter your comment!
Please enter your name here