ಮಂಗಳೂರು(ಪುತ್ತೂರು): ಶ್ರೀರಂಗಪಟ್ಟಣದಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಡಿಯಲ್ಲಿ ಆರ್ ಎಸ್ ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಿಸಲಾಗಿದೆ.
ವುಮೆನ್ ಇಂಡಿಯಾ ಮೂವ್ ಮೆಂಟ್ ಸಂಘಟನೆಯಿಂದ ಪುತ್ತೂರು ನಗರ, ಉಪ್ಪಿನಂಗಡಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪುತ್ತೂರು ನಗರ ಠಾಣೆಯಲ್ಲಿ ವುಮೆನ್ ಇಂಡಿಯಾ ಮೂವ್ ಮೆಂಟ್ ಸಂಘಟನೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷೆ ಝಾಹಿದಾ ಸಾಗರ್, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಾರ್ಯದರ್ಶಿ ಸೌಧ ಮಠ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ವುಮೆನ್ ಇಂಡಿಯಾ ಮೂವ್ ಮೆಂಟ್ ನ ಬೆಳ್ತಂಗಡಿ ಕ್ಷೇತ್ರ ಸಮಿತಿ ಸದಸ್ಯರಾದ ಆಶಿಕಾ, ಅಝೀನಾ ಚಾರ್ಮಾಡಿ, ಸಾಹಿನಾ, ಆಯಿಷಾ, ಮರಿಯಮ್ಮ ದೂರು ದಾಖಲಿಸಿದ್ದಾರೆ.
ಇನ್ನೊಂದೆಡೆ ಮಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರೆ ಯು ಟಿ ಫರ್ಝಾನ ಆರ್ ಎಸ್ ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಯನ್ನು ಖಂಡಿಸಿದ್ದು, ಮುಸ್ಲಿಂ ಮಹಿಳೆಯರ ಬಗ್ಗೆ ಪ್ರಭಾಕರ ಭಟ್ ಅವರಿಗೆ ಇಷ್ಟು ದ್ವೇಷ ಯಾಕೆ ? ಅವರಿಗೆ ಮ್ಯಾನರ್ಸ್ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಪದೇ ಪದೇ ದ್ವೇಷಕಾರುವ ವ್ಯಕ್ತಿ ಹಿಂದೂ ಸಮುದಾಯದ ಮುಖಂಡರಾಗಲು ಸಾಧ್ಯವಿಲ್ಲ. ಪ್ರಬಾಕರ್ ಭಟ್ ಅವರಿಗೆ ಆರ್ ಎಸ್ ಎಸ್ ನವರೇ ಬಹಿಷ್ಕಾರ ಹಾಕಬೇಕು. ಪ್ರಭಾಕರ ಭಟ್ ಶಾಲೆಯ ಹೆಣ್ಣುಮಕ್ಕಳ ಅವಸ್ಥೆ ಯಾವ ರೀತಿ ಇರಬಹುದು? ಅವರ ಶಾಲೆಗೆ ಹೆಣ್ಣು ಮಕ್ಕಳನ್ನು ಕಳುಹಿಸೋಕೆ ಹೆತ್ತವರಿಗೆ ಭಯ ಆಗಲ್ಲವೇ ಎಂದು ಪ್ರಶ್ನಿಸಿರುವ ಫರ್ಝಾನ ಕಲ್ಲಡ್ಕ ಶಾಲೆಯ ಬಗ್ಗೆ ಸರ್ವೆ ಆಗಬೇಕಿದೆ ಎಂದು ಹೇಳಿದ್ದಾರೆ. ಕಲ್ಲಡ್ಕ ಭಟ್ ಅವರ ಹೇಳಿಕೆ ಪ್ರತೀ ಮಹಿಳೆಗೆ ಮಾಡಿದ ಅವಮಾನ. ಮುಸ್ಲಿಂ ಮಹಿಳೆಯರಿಗೆ ಗಂಡನನ್ನು ಕೊಡಲು ಇವರು ಯಾರು? ಇವರ ಹೆಂಡತಿಯರು ಸರಿ ಇದ್ದಾರ ಅನ್ನೋದನ್ನು ಪ್ರಶ್ನೆ ಮಾಡಬೇಕಿದೆ ಎಂದು ಫರ್ಝಾನ ಖಾರವಾಗಿ ಹೇಳಿದ್ದಾರೆ.
ಡಿ.24ರಂದು ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಹನುಮ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಹನುಮಮಾಲೆ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿ ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ. ಅವರಿಗೆ ಪರ್ಮನೆಂಟ್ ಗಂಡ ಇರಲಿಲ್ಲ. ಪರ್ಮನೆಂಟ್ ಗಂಡನನ್ನು ಕೊಟ್ಟಿದ್ದು ಮೋದಿ ಸರಕಾರ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.