ಧಾರ್ಮಿಕ ಭಾವನೆಗಳಿಗೆ ಧಕ್ಕೆ-ಕ್ರಿಸ್ಮಸ್‌ ಆಚರಣೆ ವೇಳೆ ಕೇಕ್‌ಗೆ ಮದ್ಯ ಸುರಿದು ಬೆಂಕಿ ಹಚ್ಚಿದ ಆರೋಪ-ನಟ ರಣಬೀರ್‌ ಕಪೂರ್‌ ವಿರುದ್ಧ ದೂರು ದಾಖಲು

ಮಂಗಳೂರು(ಮುಂಬೈ): ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಟ ರಣಬೀರ್‌ ಕಪೂರ್‌  ವಿರುದ್ಧ ದೂರು ದಾಖಲಾಗಿದೆ. ಬಾಂಬೆ ಹೈಕೋರ್ಟ್‌ ವಕೀಲರಾದ ಪಂಕಜ್‌ ಮಿಶ್ರಾ ಹಾಗೂ ಆಶಿಷ್‌ ರಾಜ್‌ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ರಣಬೀರ್‌ ಕಪೂರ್‌ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಘಾಟ್ ಕೋಪರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಣಬೀರ್‌ ಕಪೂರ್‌ ಹಾಗೂ ಅವರ ಕುಟುಂಬಸ್ಥರು ಕ್ರಿಸ್‌ಮಸ್‌ ಸಂಭ್ರಮಾಚರಣೆಯ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ವ್ಯಕ್ತಿಯೊಬ್ಬರು ಕೇಕ್‌ ಮೇಲೆ ಮದ್ಯ ಸುರಿದಿದ್ದಾರೆ. ರಣಬೀರ್‌ ಅದಕ್ಕೆ ಬೆಂಕಿ ಹಚ್ಚಿದ ಬಳಿಕ ಜೈ ಮಾತಾ ದಿ ಎಂದು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು ಟೀಕೆಗೆ ಗುರಿಯಾಗಿದೆ. ಅಗ್ನಿಯು ಹಿಂದುತ್ವದ ಸಂಕೇತವಾಗಿದ್ದು, ರಣಬೀರ್‌ ಕಪೂರ್‌ ಅವರು ಸಂಭ್ರಮಾಚರಣೆ ಹೆಸರಿನಲ್ಲಿ ಹಿಂದೂಗಳ ನಂಬಿಕೆಗೆ ಧಕ್ಕೆ ತಂದಿದ್ದಾರೆ. ಒಂದು ಧರ್ಮದ ಆಚರಣೆ ವೇಳೆ ಇನ್ನೊಂದು ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಕ್ರಿಸ್‌ಮಸ್‌ ಸಂಭ್ರಮಾಚರಣೆಯಲ್ಲಿ ಪತ್ನಿ ಆಲಿಯಾ ಭಟ್‌ ಸೇರಿ ಅವರ ಕುಟುಂಬಸ್ಥರು ಭಾಗಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ರಣಬೀರ್‌ ಕಪೂರ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಣಬೀರ್‌‌ ಕಪೂರ್ ಅವರ‌ ದೊಡ್ಡಮ್ಮ, ನಟಿಯರಾದ ಕರಿಶ್ಮಾ ಕಪೂರ್‌ ಮತ್ತು ಕರೀನಾ ಕಪೂರ್‌ ತಾಯಿ ಬಬಿತಾ ಕ್ರೈಸ್ತ ಮತಸ್ಥರಾಗಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here