ಮಹತ್ವದ ನಿರ್ಧಾರ ಕೈಗೊಂಡ ಕೆಎಸ್‌ಆರ್‌ಟಿಸಿ-ಪ್ರಯಾಣಿಕರ ಅಪಘಾತ ಪರಿಹಾರ ಮೊತ್ತ 3ರಿಂದ 10 ಲಕ್ಷಕ್ಕೆ ಹೆಚ್ಚಳ

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರಯಾಣಿಕರ ಅಪಘಾತ ಪರಿಹಾರ ಮೊತ್ತವನ್ನು 3 ರಿಂದ 10 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್ಸುಗಳು ಅಪಘಾತಕ್ಕೀಡಾದಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ದುರದೃಷ್ಟವಶಾತ್ ಮೃತಪಟ್ಟಲ್ಲಿ, ಮೃತ ಪ್ರಯಾಣಿಕರ ಅವಲಂಬಿತರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ವತಿಯಿಂದ ನೀಡಲಾಗುತ್ತಿದ್ದ ಆರ್ಥಿಕ ಪರಿಹಾರ ಮೊತ್ತವನ್ನು 3 ಲಕ್ಷದಿಂದ 10 ಲಕ್ಷದವರೆಗೆ 2024ರಿಂದ ಜಾರಿಗೆ ಬರುವಂತೆ ಹೆಚ್ಚಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.

ಮೃತರ ಅವಲಂಬಿತರಿಗೆ ಹೆಚ್ಚುವರಿ ಪರಿಹಾರ ಮೊತ್ತವನ್ನು ನೀಡುವ ಸಲುವಾಗಿ ರೂ.50ರಿಂದ ರೂ.99ರವರೆಗಿನ ಮುಖ ಬೆಲೆಯ ಟಿಕೆಟ್ ಪಡೆದು ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ ತಲಾ ಒಂದು ರೂಪಾಯಿ ಹಾಗೂ ₹100 ಹಾಗೂ ಹೆಚ್ಚಿನ ಬೆಲೆಯ ಟಿಕೆಟ್ ಪಡೆದು ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ ತಲಾ ಎರಡು ರೂಪಾಯಿಯಂತೆ ಅಪಘಾತ ಪರಿಹಾರ ನಿಧಿ ವಂತಿಕೆ ಸಂಗ್ರಹಣೆಯನ್ನೂ ಕೂಡ ಜ.1ರಿಂದ ಆರಂಭಿಸಲಾಗುವುದು ಎಂದು ಹೇಳಿದೆ. ಈ‌ ಹಿಂದೆ ರೂ.100 ಮುಖ ಬೆಲೆಯ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ಒಂದು ರೂಪಾಯಿ ಅಪಘಾತ ಪರಿಹಾರ ನಿಧಿ ವಂತಿಕೆಯನ್ನು ಸಂಗ್ರಹಣೆ ಮಾಡಲಾಗುತ್ತಿತ್ತು. ಒಂದರಿಂದ ₹49ರ ವರೆಗಿನ ಮುಖ ಬೆಲೆಯ ಟಿಕೆಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರಿಂದ ಯಾವುದೇ ಅಪಘಾತ ಪರಿಹಾರ ನಿಧಿ ವಂತಿಕೆ ಸಂಗ್ರಹಿಸುವುದಿಲ್ಲ. ಆದರೆ ದುರದೃಷ್ಟವಶಾತ್ ಅಪಘಾತದಲ್ಲಿ ಮೃತಪಟ್ಟಲ್ಲಿ ಪರಿಹಾರ ಮೊತ್ತವು ಅವರ ಅವಲಂಬಿತರಿಗೆ ದೊರಕಲಿದೆ ಎಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here