ಮಂಗಳೂರು(ಚಿಕ್ಕಮಗಳೂರು): ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ಖಾಸಗಿ ಶಾಲೆಯೊಂದರ ಬಸ್ ಚಾಲಕನ ಪ್ರೇಮದ ಬಲೆಗೆ ಸಿಲುಕಿದ 8ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿ ಜಾಹ್ನವಿ(14), ಡ್ರೈವರ್ ಅಂಕಲ್ ಸಂತೋಷ (38) ಎಂಬಾತನ ಜತೆ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿರುವ ಘಟನೆ ತಡವಾಗಿ ವರದಿಯಾಗಿದೆ.
ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಜಾಹ್ನವಿಯನ್ನು ಆಕೆಯ ಶಾಲೆಯ ಬಸ್ ಡ್ರೈವರ್ ಸಂತೋಷ ಪ್ರೀತಿಸುವಂತೆ ಕೀಟಲೆ ನೀಡಿ ಪೀಡಿಸುತ್ತಿದ್ದನು. ಈ ಬಗ್ಗೆ ವಿದ್ಯಾರ್ಥಿನಿಯು ಮನೆಯಲ್ಲಿ ಪೋಷಕರೊಂದಿಗೆ ಹೇಳಿಕೊಂಡಿದ್ದಳು. ಇದರ ಗಂಭೀರತೆ ಪರಿಗಣಿಸಿ ಪೋಷಕರು ಕೂಡಲೇ ಬಸ್ ಚಾಲಕನ ಅತಿರೇಕದ ವರ್ತನೆ ಬಗ್ಗೆ ಶಾಲೆಯ ಮುಖ್ಯಸ್ಥರ ಬಳಿ ದೂರು ನೀಡಿದ್ದರು ಎನ್ನಲಾಗಿದೆ. ಆದರೆ ಶಿಕ್ಷಣ ಸಂಸ್ಥೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಇದೇ ಖಾಸಗಿ ಶಾಲೆಯಲ್ಲಿ ಬಸ್ ಚಾಲಕನಾಗಿದ್ದ ಸಂತೋಷ ನಿರಂತರ ಮಗಳ ವಯಸ್ಸಿಗೆ ಸಮಾನಳಾದ ಜಾಹ್ನವಿಗೆ ಪ್ರೀತಿ-ಪ್ರೇಮದ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದ. ವಿದ್ಯಾರ್ಥಿನಿಯ ಪೋಷಕರು ಆತನಿಗೆ ಎಚ್ಚರಿಕೆ ನೀಡಿದರೂ ಆಕೆಯನ್ನು ಪುಸಲಾಯಿಸಿ ಸ್ನೇಹ ಎಂದೆಲ್ಲ ಹೇಳಿಕೊಂಡು ಆತ್ಮೀಯತೆ ಬೆಳೆಸಿಕೊಂಡಿದ್ದಾನೆ. ಜಾಹ್ನವಿ ಡಿ.31ರಂದು ಸ್ನೇಹಿತರ ಜೊತೆ ಹೊಸ ವರ್ಷದ ಪಾರ್ಟಿಗೆಂದು ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಮನೆಯಿಂದ ಹೊರಬಂದ ಜಾಹ್ನವಿಯನ್ನು ಸಂತೋಷ ಸುತ್ತಾಡಲು ಕರೆದುಕೊಂಡು ಹೋಗಿದ್ದಾನೆ. ಸುತ್ತಾಡಿ ಕೊನೆಯಲ್ಲಿ ಇಬ್ಬರೂ ರೈಲಿಗೆ ಅಡ್ಡವಾಗಿ ನಿಂತು ಸಾವಿಗೀಡಾಗಿದ್ದಾರೆ. ಚೆಲ್ಲಾಪಿಲ್ಲಿಯಾದ ಮೃತ ದೇಹಗಳನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರಿಕ್ಷೆಗೆ ರವಾನೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ದುರ್ಘಟನೆ ನಡೆದಿದೆ. ಯಾರ ಗಮನಕ್ಕೂ ಬಾರದೇ ಇದ್ದ ಕಾರಣ ಮತ್ತು ಯಾರೂ ನೋಡದೇ ಇರುವುದರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಶಾಲೆಯ ಬಸ್ ಚಾಲಕನ ದುರ್ವರ್ತನೆಯ ಬಗ್ಗೆ ಆಡಳಿತ ಸಮಿತಿಗೆ ಪೋಷಕರು ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಪೋಷಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಮಗಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.