ಮಂಗಳೂರು(ಉಳ್ಳಾಲ): ಮದುವೆಯಾಗುವುದಾಗಿ ನಂಬಿಸಿ ಉಳ್ಳಾಲ ತಾಲೂಕಿನ ಕುಂಪಲದ ಬಾಡಿಗೆ ಮನೆಯಲ್ಲಿ ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯನ್ನ ಕೂಡಿಹಾಕಿ, ನಾಲ್ಕು ತಿಂಗಳಿನಿಂದ ನಿರಂತರ ಅತ್ಯಾಚಾರಗೈದ ಮೂಡಿಗೆರೆಯ ಯುವಕನನ್ನು ಉಳ್ಳಾಲ ಪೊಲೀಸರು ಪೋಕ್ಸೊ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ, ಅಣಜೂರು ಗ್ರಾಮದ ನಿವಾಸಿ ಮೊಹಮ್ಮದ್ ರಾಝೀನ್(25) ಬಂಧಿತ ಆರೋಪಿ. ರಾಝೀನ್ 17 ವರ್ಷದ ಪರಿಶಿಷ್ಟ ಜಾತಿಯ ಅಪ್ರಾಪ್ತೆಯನ್ನು ಪ್ರೀತಿಸುವ ನಾಟಕವಾಡಿ ನಾಲ್ಕು ತಿಂಗಳ ಹಿಂದೆ ಆಕೆಯನ್ನು ಮಂಗಳೂರಿಗೆ ಕರೆದುಕೊಂಡು ಬಂದಿದ್ದ. ಅಲ್ಲಿಂದ ತನ್ನ ರಿಕ್ಷಾದಲ್ಲಿ ಕುಂಪಲದ ಬಾಡಿಗೆ ಮನೆಯೊಂದಕ್ಕೆ ಕರೆದೊಯ್ದು ಮದುವೆಯಾಗೋದಾಗಿ ನಂಬಿಸಿ ನಿರಂತರ ಅತ್ಯಾಚಾರಗೈದಿದ್ದಾನೆ. ಊರಲ್ಲಿ ಅಜ್ಜಿಯ ಪಾಲನೆಯಲ್ಲಿದ್ದ ಅಪ್ರಾಪ್ತ ಬಾಲಕಿ, ರಾಝೀನ್ ಮಾತನ್ನು ನಂಬಿ ಕುಂಪಲದ ಬಾಡಿಗೆ ಮನೆಯಲ್ಲೇ ದಿಕ್ಕು ತೋಚದೆ ವಾಸಿಸುತ್ತಿದ್ದಳು. ಅನುಮಾನಗೊಂಡ ಬಜರಂಗದಳ ಕಾರ್ಯಕರ್ತರು ಜೋಡಿಯನ್ನು ಉಳ್ಳಾಲ ಪೊಲೀಸರ ವಶಕ್ಕೆ ನೀಡಿದ್ದರು. ಅಪ್ರಾಪ್ತ ಬಾಲಕಿ ನೀಡಿರುವ ಹೇಳಿಕೆಯಿಂದ ಸತ್ಯಾಂಶ ಬೆಳಕಿಗೆ ಬಂದಿದೆ. ಆರೋಪಿ ರಾಝೀನ್ ನನ್ನು ಉಳ್ಳಾಲ ಪೊಲೀಸರು ಪೋಕ್ಸೊ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.