ಮಂಗಳೂರು(ಬೆಳಗಾವಿ): ಇಲ್ಲಿನ ಕೋಟೆ ಕೆರೆಯ ಉದ್ಯಾನದಲ್ಲಿ ಮಾತನಾಡುತ್ತ ಕುಳಿತಿದ್ದ ಅಕ್ಕ– ತಮ್ಮನನ್ನು ಪ್ರೇಮಿಗಳೆಂದು ಭಾವಿಸಿ ಎಳೆದೊಯ್ದ ಎಂಟು ಆರೋಪಿಗಳ ತಂಡ, ಮನಸೋ ಇಚ್ಚೆ ಹಲ್ಲೆ ನಡೆಸಿದ ಘಟನೆ ಜ.6ರ ಸಂಜೆ ನಡೆದಿದೆ.
ಬೆಳಗಾವಿ ತಾಲೂಕಿನ ಯಮನಾಪುರ ಗ್ರಾಮದ ಸಚಿನ್ ಲಮಾನಿ (22) ಹಾಗೂ ಮುಸ್ಕಾನ್ ಪಟೇಲ್ (23) ಹಲ್ಲೆಗೆ ಒಳಗಾದವರು. ಯುವನಿಧಿಗೆ ಅರ್ಜಿ ಸಲ್ಲಿಸಲು ಬೆಳಗಾವಿಗೆ ಬಂದಿದ್ದು, ಸೈಬರ್ ಕೇಂದ್ರದಲ್ಲಿ ಸರ್ವರ್ ಸಮಸ್ಯೆ ಇದ್ದಿದ್ದರಿಂದ ಕೆಲಸ ಸ್ಥಗಿತವಾಗಿತ್ತು. ಸಮಯ ಕಳೆಯಲು ಇಬ್ಬರೂ ಇಲ್ಲಿನ ಕೋಟೆ ಕೆರೆಯ ಉದ್ಯಾನದಲ್ಲಿ ಬಂದು ಮಾತನಾಡುತ್ತಾ ಕುಳಿತಿದ್ದರು. ಈ ವೇಳೆ ಆರೋಪಿಗಳ ಗುಂಪು ನಮ್ಮತ್ತ ಧಾವಿಸಿ ಏಕಾಏಕಿ ಹಲ್ಲೆ ಮಾಡಿದರು. ನೀವು ಯಾರು, ಏನು ಸಂಬಂಧ ಎಂದೆಲ್ಲ ಪ್ರಶ್ನೆ ಮಾಡಿ ನಮ್ಮನ್ನು ಎಳೆದುಕೊಂಡು ಹತ್ತಿರದ ರೂಮಿಗೆ ಕರೆದುಕೊಂಡು ಹೋದರು. ಮೂರು ಗಂಟೆ ರೂಮಿನಲ್ಲಿ ಕೂಡಿಹಾಕಿ, ಮನಸೋ ಇಚ್ಚೆ ಥಳಿಸಿದರು ಎಂದು ಗಾಯಗೊಂಡ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯುವಕ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಿ ಹಾಕಿದ ಲೊಕೇಷನ್ ಪತ್ತೆ ಮಾಡಿದ ನಗರ ಪೊಲೀಸರು ಇಬ್ಬರನ್ನೂ ರಕ್ಷಿಸಿದ್ದರು. ಬಳಿಕ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣ ಸಂಬಂಧ ಜ.7ರಂದು ಎಂಟು ಮಂದಿಯನ್ನು ಬಂಧಿಸಲಾಗಿದೆ. 17 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್ ಕಮಿಷನರ್ ಎಸ್.ಎನ್.ಸಿದ್ರಾಮಪ್ಪ ತಿಳಿಸಿದ್ದಾರೆ.
ಈ ನಡುವೆ, ಬೆಳಗಾವಿಯಲ್ಲಿ ಹಿಂದೂ ಯುವಕನನ್ನು ಮನಬಂದಂತೆ ಥಳಿಸಲಾಗಿದೆ. ಈ ವಿದ್ಯಮಾನ ಗಮನಿಸಿದರೆ, ರಾಜ್ಯದಲ್ಲಿ ಸರ್ಕಾರ ಬದುಕಿದಯೋ ಇಲ್ಲವೋ ಗೊತ್ತಾಗುತ್ತಿಲ್ಲ’ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆಗೊಳಗಾಗಿ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ಮತ್ತು ಯುವತಿಯನ್ನು ಭಾನುವಾರ ಭೇಟಿಯಾದ ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಮುಸ್ಲಿಂ ಗೂಂಡಾಗಳು ಹಲ್ಲೆ ಮಾಡುತ್ತಿದ್ದಾರೆ. ನಿತ್ಯ ಇಂಥ ಘಟನೆ ನಡೆಯುತ್ತಲೇ ಇವೆ. ಹಿಂದೂ- ಮುಸ್ಲಿಮರ ಮಧ್ಯೆ ಗಲಾಟೆ ನಡೆಸಿ, ಚುನಾವಣೆ ಎದುರಿಸಲು ಕಾಂಗ್ರೆಸ್‌ನವರು ತೀರ್ಮಾನಿಸಿದ್ದಾರೆ’ ಎಂದೂ ಆರೋಪಿಸಿದ್ದಾರೆ. ‘ಬೆಳಗಾವಿಯಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಘಟನೆ ನಡೆದಿದ್ದು ಆಶ್ಚರ್ಯ ತಂದಿದೆ. ಯುವಕನಿಗೆ ಕಬ್ಬಿಣದ ರಾಡ್ ನಿಂದ ಹೊಡೆಯಲಾಗಿದೆ. ಈ ಬಗ್ಗೆ ತನಿಖೆ ಕೈಗೊಳ್ಳಲು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಬೆಳಗಾವಿಗೆ ತನಿಖಾ ದಳ ಕಳುಹಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.