ಮಂಗಳೂರು: ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ನೇತೃತ್ವದಲ್ಲಿ ಇಂಡಿಯನ್ ಒಲಿಂಪಿಕ್ ಎಸೋಸಿಯೇಷನ್ ಮತ್ತು ಭಾರತ ಸರ್ಕಾರದ ಕ್ರೀಡಾ ಮಂತ್ರಾಲಯ ಇದರ ಅನುಮೋದನೆಯೊಂದಿಗೆ 21ರ ವಯೋಮಿತಿಯೆ ಬೀಚ್ ವಾಲಿಬಾಲ್ ಪಂದ್ಯಾಟವು ಜ.5 ರಂದು ಆರಂಭಗೊಂಡಿದ್ದು, ಜ.11ರವರೆಗೆ ಗುಜರಾತಿನ ದಿಯು ನಡೆಯಲಿದೆ.
ಪಂದ್ಯಾಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಂಡದಲ್ಲಿ ಪುತ್ತೂರಿನ ಪ್ರತಿಭೆಗಳಾದ ಪವಿತ್ ಮತ್ತು ಮೊಹಮ್ಮದ್ ಅಝೀಂ ಹಾಗೂ ಮಹಿಳಾ ತಂಡದಲ್ಲಿ ಧಾರವಾಡ ಜಿಲ್ಲೆಯ ಶಿಲ್ಪ ಹಾಗೂ ಶ್ರೀದೇವಿ ಕ್ರೀಡಾಪಟುಗಳಾಗಿ ಭಾಗವಹಿಸಿದ್ದಾರೆ. ಪವಿತ್ ಮತ್ತು ಮೊಹಮ್ಮದ್ ಅಜೀಂ ಪುತ್ತೂರಿನ ಮಿತ್ರವೃಂದ ವಾಲಿಬಾಲ್ ಅಕಾಡೆಮಿಯಲ್ಲಿ ಕಳೆದ 10 ವರ್ಷಗಳಿಂದ ಎನ್ ಎ ಎಸ್ ಕೋಚ್ ಪಿ ವಿ ನಾರಾಯಣ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದು, ಕಳೆದ ಆರು ವರ್ಷಗಳಿಂದ ಸತತವಾಗಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.
ಮಹಿಳಾ ಹಾಗೂ ಪುರುಷ ಬೀಚ್ ವಾಲಿಬಾಲ್ ತಂಡಗಳಿಗೆ ಪುತ್ತೂರು ಮಿತ್ರವೃಂದ ವಾಲಿಬಾಲ್ ಅಕಾಡೆಮಿಯಿಂದ ತರಬೇತಿ ನೀಡಲಾಗುತ್ತಿದ್ದು, ಕಳೆದ 5 ವರ್ಷಗಳಿಂದ ತಂಡದ ಪ್ರಬಂಧಕರಾಗಿ ಹಮೀದ್ ಸಾಜ ಕಾರ್ಯ ನಿರ್ವಹಿಸುತ್ತಿದ್ದಾರೆ. ಜ.9ರಂದು ನಡೆದ ಕ್ವಾಟರ್ ಫೈನಲ್ ಪಂದ್ಯಾಟದಲ್ಲಿ ಕರ್ನಾಟಕ ಪುರುಷ ಹಾಗೂ ಮಹಿಳಾ ಬೀಚ್ ವಾಲಿಬಾಲ್ ತಂಡವು ಗುಜರಾತಿನ ಮಹಿಳಾ ಮತ್ತು ಪುರುಷ ತಂಡವನ್ನು ಸೋಲಿಸಿ ಸೆಮಿ ಫೈನಲ್ ಗೆ ಪ್ರವೇಶ ಪಡೆದಿದೆ.
ಇಂದು (ಜ.10) ಸೆಮಿಫೈನಲ್ ಪಂದ್ಯಾಟ ನಡೆಯಲಿದ್ದು, ಜ.11ರಂದು ಫೈನಲ್ ಪಂದ್ಯಾಟ ನಡೆಯಲಿದೆ.