ಮಂಗಳೂರು: ಬೈಕಂಪಾಡಿಯಲ್ಲಿರುವ ಸೇವಾಕೇಂದ್ರಕ್ಕೆ ಮಹೀಂದ್ರ ಟ್ರಿಯೋ ಇಲೆಕ್ಟ್ರಿಕಲ್ ಆಟೋರಿಕ್ಷಾ ಚಾಲಕರು ಸರ್ವಿಸ್ ಗೆ ಹೋದಾಗಲೆಲ್ಲ ಭಾರೀ ತೊಂದರೆಯಾಗುತ್ತಿದ್ದು ಕಂಪೆನಿಯವರು ಇದರ ಬಗ್ಗೆ ಕೂಡಲೇ ಕ್ರಮ ತೆಗೆದು ಕೊಳ್ಳಬೇಕೆಂದು ಒತ್ತಾಯಿಸಿ ಮಂಗಳೂರು ನಗರದ ಮಿನಿ ವಿಧಾನಸೌಧದ ಮುಂಭಾಗ ಜ.10ರಂದು ಇವಿ ಆಟೋರಿಕ್ಷಾ ಚಾಲಕರು ಪ್ರತಿಭಟನೆ ನಡೆಸಿದರು.
ಚಾಲಕರು ಮತ್ತು ಮಾಲಕರು ಇವಿ ಟ್ರಿಯೋ ರಿಕ್ಷಾ ಚಾಲಕರ ಸಮಿತಿ ಅಧ್ಯಕ್ಷ ಅನಿಲ್ ಸಲ್ದಾನ್ಹ ಮಾತನಾಡಿ, ವಾಹನ ರೀಪೇರಿಗೆ ಹೋದಾಗಲೆಲ್ಲ ಸರಿಯಾದ ಸಮಯಕ್ಕೆ ರಿಪೇರಿ ಮಾಡಿಕೊಡುತ್ತಿಲ್ಲ. ಬಿಡಿಭಾಗಗಳು ಸಿಗುತ್ತಿಲ್ಲ. ವಾರಂಟಿ ಷರತ್ತುಗಳನ್ನು ಪಾಲಿಸುತ್ತಿಲ್ಲ. ಸರಕಾರದ ಸಬ್ಸಿಡಿಯನ್ನು ನೀಡುತ್ತಿಲ್ಲ ಎಂದು ದೂರಿದ್ದಾರೆ. ಸಮಿತಿಯ ಅಶ್ವಿನ್ ಮಾತನಾಡಿ, ನಮ್ಮ ಜೀವನಕ್ಕೆ ಆಟೋರಿಕ್ಷಾವೇ ಆಧಾರ. ಮಹೀಂದ್ರ ಕಂಪೆನಿಯವರ ಸರ್ವೀಸ್ ಸೆಂಟರ್ ಬೈಕಂಪಾಡಿಯಲ್ಲಿದ್ದು ಸರ್ವೀಸ್ ಅಥವಾ ದುರಸ್ತಿಗೆ ಹಲವು ಬಾರಿ ಅಲೆದಾಡುವಂತೆ ಮಾಡುತ್ತಾರೆ. ಕೆಲವೊಂದು ಬಾರಿ ರಿಪೇರಿಗೆ ಒಂದು ತಿಂಗಳು ತಗಲಿದ್ದೂ ಇದೆ. ವಿಚಾರ ತಿಳಿಸಿದಲ್ಲಿ ಉಢಾಫೆಯಾಗಿ ವರ್ತಿಸುತ್ತಾರೆ. ಅವರ ಜತೆ ಸಭೆ ನಡೆಸಿ ಸಮಸ್ಯೆ ಹೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಲಾಯರ್ ನೋಟೀಸ್ ಗೂ ಸ್ಪಂದಿಸಿಲ್ಲ ಎಂದು ಹೇಳಿದರು.
ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ರೋಹಿತ್ ಕೋಟ್ಯಾನ್, ಶರತ್ ಪದವಿನಂಗಡಿ, ರಾಮನಾಥ ಪ್ರಭು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯ ವೇಳೆ ಮಹೀಂದ್ರ ಕಂಪೆನಿಯ ಸಿಬ್ಬಂದಿಯೊಬ್ಬರು ಗೌಪ್ಯವಾಗಿ ಆಟೋರಿಕ್ಷಾ ಚಾಲಕರ ವೀಡಿಯೋ ಮಾಡುತ್ತಿದ್ದು, ಆಟೋಚಾಲಕರು ಆತನನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಪೊಲೀಸರು ಸಿಬಂದಿಯನ್ನು ವಶಕ್ಕೆ ಪಡೆದುಕೊಂಡರು.