ಮಂಗಳೂರು: ಪ್ರಿಯತಮೆಗಾಗಿ ಅವಳಂತೆ ವೇಷ ಧರಿಸಿ ಪರೀಕ್ಷೆ ಬರೆಯಲು ಹೋಗಿ ಪ್ರಿಯತಮ ಪೊಲೀಸರ ಅತಿಥಿಯಾಗಿರುವ ಘಟನೆ ಪಂಜಾಬ್ನ ಫರೀದ್ಕೋಟ್ನಲ್ಲಿ ನಡೆದಿದೆ.
ಜನವರಿ 7 ರಂದು, ಕೊಟ್ಕಾಪುರದ ಡಿಎವಿ ಪಬ್ಲಿಕ್ ಸ್ಕೂಲ್ನಲ್ಲಿ ಬಾಬಾ ಫರೀದ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಬಹುಪಯೋಗಿ ಆರೋಗ್ಯ ಕಾರ್ಯಕರ್ತರ ಪರೀಕ್ಷೆಯನ್ನು ನಡೆಸಲಾಗಿತ್ತು. ಫಾಜಿಲ್ಕಾದ ಅಂಗ್ರೇಜ್ ಸಿಂಗ್ ತನ್ನ ಗೆಳತಿ ಪರಮ್ಜಿತ್ ಕೌರ್ ವೇಷ ಧರಿಸಿ ಪರೀಕ್ಷೆ ಬರೆಯಲು ನಿರ್ಧರಿಸಿ ಕೆಂಪು ಬಳೆಗಳು, ಬಿಂದಿ, ಲಿಪ್ಸ್ಟಿಕ್ ಮತ್ತು ಮಹಿಳೆಯರ ವೇಷದಲ್ಲಿ ಅಲಂಕೃತನಾಗಿ ಪರೀಕ್ಷೆ ಬರೆಯಲು ತೆರಳಿದ್ದ. ಅಂಗ್ರೇಜ್ ಸಿಂಗ್ ಎಲ್ಲಾ ಪ್ರಯತ್ನಗಳನ್ನು ಮಾಡಿಕೊಂಡಿದ್ದ. ನಕಲಿ ಮತದಾರ ಚೀಟಿ ಮತ್ತು ಆಧಾರ್ ಕಾರ್ಡ್ ಬಳಸಿಕೊಂಡು ತಾನು ಪರಮ್ಜಿತ್ ಕೌರ್ ಎಂದು ಸಾಬೀತುಪಡಿಸಿದ್ದ. ಆದರೆ, ಬೆರಳಚ್ಚು ಪರೀಕ್ಷೆ ಮಾಡಿದಾಗ ಪ್ರಿಯತಮ ಸಿಕ್ಕಿಕೊಂಡಿದ್ದಾನೆ. ಬಯೋಮೆಟ್ರಿಕ್ ಸಾಧನದಲ್ಲಿ ನಿಜವಾದ ಅಭ್ಯರ್ಥಿಯ ಫಿಂಗರ್ಪ್ರಿಂಟ್ಗಳನ್ನು ಹೊಂದಿಸಲು ಅಂಗ್ರೇಜ್ ಸಿಂಗ್ ಬೆರಳಚ್ಚುಗಳು ವಿಫಲವಾದ ನಂತರ ಆತನ ಬಣ್ಣ ಬಯಲಾಗಿದೆ. ಪ್ರೀತಿಯ ಬಲೆಯಲ್ಲಿ ಬಿದ್ದ ಅಂಗ್ರೇಜ್ ಸಿಂಗ್ ಪ್ರಿಯತಮೆಯ ವೇಷ ಧರಿಸಿ ಸಹಾಯ ಮಾಡಲು ಹೋಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.