ಮಂಗಳೂರು(ಹೊಸದಿಲ್ಲಿ): ಅಯ್ಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ಸಮಾರಂಭಕ್ಕೆ ದಿನಗಣನೆ ಆರಂಭಗೊಂಡಿರುವ ನಡುವೆ 500 ರೂಪಾಯಿ ಮುಖಬೆಲೆಯ ನೋಟಿನಲ್ಲಿ ಮಹಾತ್ಮ ಗಾಂಧಿ, ಕೆಂಪು ಕೋಟೆ ಮತ್ತು ಕನ್ನಡಕಗಳ ಚಿತ್ರಗಳ ಸ್ಥಾನದಲ್ಲಿ ಶ್ರೀ ರಾಮ ದೇವರು, ರಾಮ ಮಂದಿರ ಮತ್ತು ಬಿಲ್ಲು ಬಾಣದ ಚಿತ್ರವಿರುವ ಎರಡು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಫೋಟೋ ಶೇರ್ ಮಾಡಿರುವ ಹಲವರು ಇವು ಅಯ್ಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ಸಮಾರಂಭದ ಸ್ಮರಣಾರ್ಥವಾಗಿ ಬಿಡುಗಡೆಗೊಳ್ಳುವ ಹೊಸ ಕರೆನ್ಸಿ ನೋಟುಗಳು ಎಂದು ಹೇಳಿಕೊಂಡಿದ್ದಾರೆ.
ಈ ವೈರಲ್ ಫೋಟೋ ಹಂಚಿಕೊಂಡ ಎಕ್ಸ್ ಬಳಕೆದಾರ ಪೋಸ್ಟ್ ಮಾಡಿದ್ದ ಮೂಲ ಇಮೇಜ್ನಲ್ಲಿ ಆತ ಈ ಇಮೇಜ್ ಎಡಿಟ್ ಮಾಡಲಾಗಿದ ಇಮೇಜ್ ಎಂಬುದನ್ನು ಸ್ಪಷ್ಟಪಡಿಸಿದ್ದ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಇಂತಹ ನೋಟುಗಳ ಕುರಿತು ಊಹಾಪೋಹಗಳನ್ನು ಅಲ್ಲಗಳೆದಿದೆ. ಮೇಲಾಗಿ ಆರ್ಬಿಐ ಹೊಸ ರೂ 500 ಮುಖಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಲಿದೆ ಎಂದು ಹೇಳುವ ಯಾವುದೇ ವರದಿಗಳು ಅಥವಾ ಪತ್ರಿಕಾ ಹೇಳಿಕೆಗಳೂ ಇಲ್ಲ. ಆರ್ಬಿಐ ವಕ್ತಾರ ಯೋಗೇಶ್ ದಯಾಳ್ ಕೂಡ ಈ ವೈರಲ್ ಪೋಸ್ಟ್ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.