ಮಂಗಳೂರು(ಹೊಸ ದಿಲ್ಲಿ): ಬಟರ್ ಚಿಕನ್ ಹಾಗೂ ದಾಲ್ ಮಖಾನಿ ಕಂಡು ಹಿಡಿದವರು ಯಾರು ಎಂಬ ವಿಚಾರ ಈಗ ಕಾನೂನು ಸಮರಕ್ಕೆ ಕಾರಣವಾಗಿದೆ. ದೇಶದ ಎರಡು ಪ್ರಮುಖ ರೆಸ್ಟೋರೆಂಟ್‌ಗಳು ಆರಂಭಿಸಿರುವ ಕಾನೂನು ಸಮರ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರುವ ಮೂಲಕ ದೇಶದ ಗಮನ ಸೆಳೆದಿದೆ.
ಮೋತಿ ಮಹಲ್ ಹಾಗೂ ದರ್ಯಾಗಂಜ್ ರೆಸ್ಟೋರೆಂಟ್‌ಗಳ ನಡುವಣ ಈ ಕಾನೂನು ಸಮರ ತಾರಕಕ್ಕೇರಿದೆ. ಎರಡೂ ಕಡೆಯ ವಕೀಲರು ತಮ್ಮದೇ ಆದ ರೀತಿ ವಾದ ಮಂಡಿಸಲು ಸಿದ್ದತೆ ನಡೆಸಿದ್ದಾರೆ. ಈ ಪ್ರಕರಣ ಸಂಬಂಧ ಜನವರಿ 16 ರಂದು ಮೊದಲ ಬಾರಿಗೆ ವಿಚಾರಣೆ ನಡೆದಿತ್ತು. ದಿಲ್ಲಿ ಹೈಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಸಂಜೀವ್ ನರುಲಾ ಅವರು ಎರಡೂ ಕಡೆಯವರಿಗೆ ಸಮನ್ಸ್ ಜಾರಿ ಮಾಡಿದ್ದರು. ಮೋತಿ ಮಹಲ್‌ನ ವಾದಕ್ಕೆ ಪ್ರತಿಯಾಗಿ ದರ್ಯಾಗಂಜ್ ರೆಸ್ಟೋರೆಂಟ್ ಮಾಲೀಕರ ಪ್ರತಿಕ್ರಿಯೆ ಏನು ಎಂದು ಕೇಳಿತ್ತು. ಈ ಸಂಬಂಧ ಒಂದು ತಿಂಗಳ ಒಳಗೆ ತಮ್ಮ ಲಿಖಿತ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಮೂರ್ತಿಗಳು ಆದೇಶ ನೀಡಿದ್ದರು.