ಮಂಗಳೂರು/ಮಂಡ್ಯ: ಶಾಲೆಗೆ ಹೋಗಿಬರುತ್ತೇನೆ ಎಂದು ಹೇಳಿಹೋಗಿದ್ದ ಮಹಿಳೆಯೊಬ್ಬರು ಕೆಲ ದಿನಗಳಲ್ಲೇ ಅನುಮಾನಾಸ್ಪದ ಸಾವಿಗೀಡಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಲುಕೋಟೆಯಲ್ಲಿ ನಡೆದಿದೆ.
ದುಷ್ಕರ್ಮಿಗಳು ಕೊಲೆಗೈದು ಮಣ್ಣಿನಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ದೀಪಿಕಾ(28) ಎಂದು ಗುರುತಿಸಲಾಗಿದ್ದು, ಪಾಂಡವಪುರ ತಾಲೂಕಿನ ಮಾಣಿಕ್ಯಹಳ್ಳಿ ಗ್ರಾಮದ ನಿವಾಸಿಯಾಗಿರುವ ದೀಪಿಕಾ ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ಜನವರಿ 20ರಂದು ದೀಪಿಕಾ ಶಾಲೆಗೆ ಹೋಗಿ ಬರುತ್ತೇನೆ ಎಂದು ಕೆಲಸಕ್ಕೆ ತೆರಳಿದ್ದರು. ಅದೇ ದಿನ ಮಧ್ಯಾಹ್ನದ ವೇಳೆಗೆ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಕುಟುಂಬಸ್ಥರು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಜ.22ರಂದು ಸಂಜೆ ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಶವ ಪತ್ತೆ ಹಚ್ಚಿದ್ದಾರೆ. ಸ್ಥಳಕ್ಕೆ ಮಂಡ್ಯ ಎಸ್ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆದಿದೆ. ಶಿಕ್ಷಕಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕ್ರಿಯಾಶೀಲರಾಗಿದ್ದರು ಎಂದು ತಿಳಿದುಬಂದಿದೆ.