ಮಂಗಳೂರು(ಉಳ್ಳಾಲ): ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿರುವ ಘಟನೆ ರಾ.ಹೆ. 66 ರ ನೇತ್ರಾವತಿ ಸೇತುವೆಯಲ್ಲಿ ತಡರಾತ್ರಿ ಸಂಭವಿಸಿದೆ.
ಬಾಗಲಕೋಟೆ ನಿವಾಸಿ ಸುರೇಶ್ (30) ಮೃತರು. ಕಲ್ಲಾಪು ಸಲಫಿ ಮಸೀದಿ ಸಮೀಪ ಕುಟುಂಬ ಸಮೇತರಾಗಿ ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದ ಸುರೇಶ್ ಪಂಪ್ ವೆಲ್ ಸಮೀಪ ಗ್ಯಾರೇಜ್ ನಡೆಸುತ್ತಿದ್ದರು. ಕಳೆದ ರಾತ್ರಿ ಗ್ಯಾರೇಜ್ ಕೆಲಸ ಮುಗಿಸಿ ಮನೆಯತ್ತ ವಾಪಸ್ಸಾಗುತ್ತಿದ್ದ ಸಂದರ್ಭ ತಡರಾತ್ರಿ 1.30 ಗಂಟೆ ಸುಮಾರಿಗೆ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದು ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.