ಮಂಗಳೂರು: ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಎಆರ್/ಡಿಎಆರ್) ಖಾಲಿ ಇರುವ (ಪುರುಷ & ತೃತೀಯ ಲಿಂಗ ಪುರುಷ) 3064 ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ಜ.28 ರಂದು ಭಾನುವಾರ ಬೆಳಿಗ್ಗೆ 11:00 ರಿಂದ 12:30 ಗಂಟೆಯ ವರೆಗೆ ನಡೆಯಲಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೂಡಬಿದ್ರೆಯಲ್ಲಿ 8 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಸುಮಾರು 17000 ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಅಭ್ಯರ್ಥಿಗಳಿಗೆ ಸಾಮಾನ್ಯ ಸೂಚನೆಗಳು:
1. ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಕನಿಷ್ಟ 120 ನಿಮಿಷಗಳ ಮುಂಚೆ ಅಂದರೆ ಬೆಳಿಗ್ಗೆ 9:00 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರತಕ್ಕದ್ದು.
2. ಅಭ್ಯರ್ಥಿಗಳು ಯಾವುದೇ ಇಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್ ಫೋನ್, ಬ್ಲೂಟೂತ್ ಉಪಕರಣ, ಪೇಪರ್ ತುಂಡು, ಪುಸ್ತಕ, ನೋಟ್ಸ್ ಇತ್ಯಾದಿ ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗತಕ್ಕದ್ದಲ್ಲ.
3. ಅಭ್ಯರ್ಥಿಗಳನ್ನು ಅವರವರ ಪ್ರವೇಶ ಪತ್ರದೊಂದಿಗೆ ಯಾವುದಾದರೂ ಗುರುತಿನ ಚೀಟಿ, ಉದಾ: ಚಾಲನಾ ಅನುಜ್ಞಾ ಪತ್ರ, ಪಾಸ್ ಪೋರ್ಟ್/ಆಧಾರ್ ಕಾರ್ಡ್/ಪಾನ್ ಕಾರ್ಡ್/ಓಟರ್ ಐಡಿಗಳನ್ನು ಪರಿಶೀಲಿಸಿ ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗುವುದು.
4. ಸದರಿ ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
ವಸ್ತ್ರ ಸಂಹಿತೆ:
1. ಪುರುಷ ಮತ್ತು ತೃತೀಯ ಲಿಂಗ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್ಗಳನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್ ಗಳನ್ನು ಧರಿಸುವುದು, ಜಿಪ್ ಪ್ಯಾಕೆಟ್ ಗಳು, ದೊಡ್ಡ ಬಟನ್ಸ್ ಇರುವ ಶರ್ಟ್ ಗಳನ್ನು ಧರಿಸತಕ್ಕದ್ದಲ್ಲ.
2. ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್ ಧರಿಸತಕ್ಕದ್ದಲ್ಲ.
3. ಪರೀಕ್ಷಾ ಕೇಂದ್ರದೊಳಗೆ ಶೂ ನಿಷೇದಿಸಲಾಗಿದ್ದು, ಅಭ್ಯರ್ಥಿಗಳು ತೆಳುವಾದ ಅಡಿಭಾಗವಿರುವ ಪಾದರಕ್ಷೆಗಳನ್ನು (ಚಪ್ಪಲಿ) ಧರಿಸುವುದು.
4. ಕುತ್ತಿಗೆ ಸುತ್ತಾ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡಗಗಳನ್ನು ಧರಿಸುವುದು ನಿಷೇದಿಸಿದೆ. ಇಂತಹ ಬೆಲೆಬಾಳುವ ವಸ್ತುಗಳ ಭದ್ರತೆ ವ್ಯವಸ್ಥೆಯು ಪರೀಕ್ಷಾ ಕೇಂದ್ರದಲ್ಲಿ ಇರುವುದಿಲ್ಲ. ಆದುದರಿಂದ ಅಭ್ಯರ್ಥಿಗಳಿಗೆ ಇಂತಹ ಬೆಲಬಾಳುವ ವಸ್ತುಗಳನ್ನು ತಮ್ಮ ಮನೆಯಲ್ಲಿಯೇ ಬಿಟ್ಟುಬರಲು ಸೂಚಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.