ಮಂಗಳೂರು(ಮೈಸೂರು): ಸಾಲಗಾರರ ಕಾಟಕ್ಕೆ ಹೆದರಿ ಕುಟುಂಬವೊಂದು ನಾಪತ್ತೆಯಾಗಿರುವ ಘಟನೆ ಮೈಸೂರಿನ ಕೆಜಿ ಕೊಪ್ಪಲಿನ ಗ್ರಾಮದಲ್ಲಿ ನಡೆದಿದ್ದು ಒಂದೇ ಕುಟುಂಬದ 5 ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ನಾಪತ್ತೆಗೂ ಮುನ್ನ ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರೊಬ್ಬರ ಮೊಬೈಲ್ ಗೆ ಮೆಸೇಜ್ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ವಾಟ್ಸಾಪ್ನಲ್ಲಿ ಸ್ನೇಹಿತರಿಗೆ ಸಂದೇಶ ಕಳುಹಿಸಿರುವ ಕುಟುಂಬ ಕಳೆದ ಎಂಟು ದಿನಗಳಿಂದ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ಕೆಜಿ ಕೊಪ್ಪಲಿನ ಮಹೇಶ್ (35) ಪತ್ನಿ ಭವಾನಿ (28) ಪುತ್ರಿ ಪ್ರೇಕ್ಷ (3) ಮಹೇಶ್ ತಂದೆ ಮಹದೇವಪ್ಪ (65) ತಾಯಿ ಸುಮಿತ್ರ (55) ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.ಕುಟುಂಬಸ್ಥರ ನಾಪತ್ತೆ ಬಗ್ಗೆ ಭವಾನಿ ಸಹೋದರ ಜಗದೀಶ್ ದೂರು ನೀಡಿದ್ದು, ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಕೆಟಿಂಗ್ ಬಿಸಿನೆಸ್ ನಡೆಸುತ್ತಿದ್ದ ಮಹೇಶ್ಗೆ, ವೀರೇಶ್ ಎಂಬುವರು ವ್ಯವಹಾರಕ್ಕೆ ಸಾಥ್ ನೀಡಿದ್ದರು. ಮಹೇಶ್ ಪರಿಚಯ ಹೇಳಿಕೊಂಡು ವೀರೇಶ್ 30 ರಿಂದ 35 ಲಕ್ಷ ಸಾಲ ಪಡೆದು ಪರಾರಿಯಾಗಿದ್ದರು. ವೀರೇಶ್ ಗೆ ಸಾಲ ನೀಡಿದವರಿಂದ ಮಹೇಶ್ ಮೇಲೆ ಒತ್ತಡ ಹೆಚ್ಚಾಗಿದೆ. ಸಾಲಗಾರರ ನಿರಂತರ ಒತ್ತಡಕ್ಕೆ ಹೆದರಿದ ಮಹೇಶ್ ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ.
ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದೆ. ಸಾಲಗಾರರು ನನಗೆ ತೊಂದರೆ ಕೊಡುತ್ತಿದ್ದಾರೆ. ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಸಾಲಗಾರರು ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ನಾವು ಕೆರೆ ಅಥವಾ ಬಾವಿಗೆ ಬೀಳುತ್ತೇವೆ. ಒಂದು ವೇಳೆ ಮೃತದೇಹ ದೊರೆತರೆ ಅಂತ್ಯಕ್ರಿಯೆ ಮಾಡಿ ಎಂದು ಸಂದೇಶ ಕಳುಹಿಸಿದ್ದಾರೆ.ಅವರನ್ನಂತೂ ಬಿಡಬೇಡಿ ಎಂದು ಮಹೇಶ್ ಮಸೇಜ್ ಕಳುಹಿಸಿ ನಾಪತ್ತೆಯಾಗಿದ್ದಾರೆ. ರಂಜಿತಾ, ದಿನೇಶ್, ಚಂದ್ರು ಹಾಗೂ ನೇತ್ರ ಎಂಬುವವರ ಹೆಸರು ವಾಯ್ಸ್ ಮೆಸೇಜ್ ನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು ಪೊಲೀಸರು ಹುಡುಕಾಡುತ್ತಿದ್ದಾರೆ.