ಮಂಗಳೂರು(ನಾಗ್ಪುರ): ನಾಗ್ಪುರ ನಗರದ ಕೈಗಾರಿಕಾ ಎಕ್ಸ್‌ಪೊ ಸಂದರ್ಭ ಶೌಚಾಲಯದಲ್ಲಿ ಮಹಿಳೆಯರ ವಿಡಿಯೋ ಚಿತ್ರೀಕರಿಸುತ್ತಿದ್ದ ಶಿಕ್ಷಕನನ್ನು ಬಂಧಿಸಲಾಗಿದೆ. ಬಂಧಿತನನ್ನು ನಾಗ್ಪುರದ ಕಸರ್‌ಪುರದ ನಿವಾಸಿ ಮಂಗೇಶ್ ವಿನಾಯಕ್ ರಾವ್ ಖರ್ಪೆ(37) ಎಂದು ಗುರುತಿಸಲಾಗಿದೆ. ಶೌಚಾಲಯದ ಕಿಟಕಿ ಮೂಲಕ ಮಹಿಳೆಯರ ವಿಡಿಯೋ ಚಿತ್ರೀಕರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿಯೊಬ್ಬ ವಿಡಿಯೋ ಚಿತ್ರೀಕರಿಸುತ್ತಿದ್ದ ಬಗ್ಗೆ ಮಹಿಳೆಯೊಬ್ಬರು ಸಂಘಟಕರಿಗೆ ದೂರು ನೀಡಿದ್ದರು. ಬಳಿಕ, ತನಿಖೆ ನಡೆಸಿ ಆರೋಪಿನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ನಗರದ ಪ್ರತಿಷ್ಠಿತ ಕಾಲೇಜಿನ ಕಲಾ ಶಿಕ್ಷಕನಾಗಿದ್ದು, ಫೆಸ್ಟಿವಲ್ ಗೇಟ್ ಅಲಂಕಾರಕ್ಕೆ ನಿಯೋಜಿಸಲಾಗಿತ್ತು. ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ ಅಂಬಜಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿನಾಯಕ್ ಗೊಲ್ಹೆ ಮತ್ತು ಅವರ ತಂಡ ಆರೋಪಿಯನ್ನು ಪತ್ತೆ ಮಾಡಿದೆ. ಎಕ್ಸ್ ಪೋ ಸಿದ್ಧತೆಯಲ್ಲಿ 4 ದಿನಗಳಿಂದ ಈತ ತೊಡಗಿಸಿಕೊಂಡಿದ್ದ ಎಂದು ವರದಿ ತಿಳಿಸಿದೆ. ಪೊಲೀಸರು ವಶಪಡಿಸಿಕೊಂಡ ಮೊಬೈಲ್‌ನಲ್ಲಿ ಹತ್ತಾರು ಮಹಿಳೆಯರ ವಿಡಿಯೊಗಳು ಪತ್ತೆಯಾಗಿದ್ದು, ಕೆಲವನ್ನು ಡಿಲೀಟ್ ಮಾಡಲಾಗಿದೆ ಎಂದು ಪರಿಶೀಲನೆ ವೇಳೆ ತಿಳಿದು ಬಂದಿದ್ದು, ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದೆ.