ಮಂಗಳೂರು(ಉತ್ತರ ಪ್ರದೇಶ): ಜ್ಞಾನವಾಪಿ ಪ್ರದೇಶದಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಾರಣಾಸಿ ಜಿಲ್ಲಾ ಕೋರ್ಟ್ ಜ.31ರಂದು ಅಂಗೀಕರಿಸಿದ್ದು, ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಿದೆ.
ಮೂಲ ಕಾಶಿ ವಿಶ್ವನಾಥ ಎಂದು ಹೇಳಲಾಗುವ ಶಿವಲಿಂಗಕ್ಕೆ ಹಿಂದೂಗಳು ಪೂಜೆ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಮುಂದಿನ 7 ದಿನಗಳಲ್ಲಿ ಅಗತ್ಯ ಕ್ರಮಕೈಗೊಳ್ಳಿ ಎಂದು ಕೋರ್ಟ್ ತಿಳಿಸಿರುವುದಾಗಿ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮಸೀದಿ ಆವರಣದಲ್ಲಿ ವಾಜುಖಾನಾ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಸರ್ವೇ ನಡೆಸುತ್ತಿರುವ ವೇಳೆ ಶಿವಲಿಂಗ ಪತ್ತೆಯಾಗಿತ್ತು. ಇದು ಕಾಶಿಯ ಮೂಲ ವಿಶ್ವನಾಥ ಎಂದು ಹೇಳಲಾಗಿದೆ. ಹಿಂದೂಗಳ ಆರಾಧ್ಯದೈವವಾದ ಶಿವನು ಹಾಳು ಪ್ರದೇಶದಲ್ಲಿ ಬಿದ್ದಿದ್ದು, ಅದನ್ನು ಶುಚಿ ಮಾಡಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹಿಂದೂಗಳು ಅರ್ಜಿ ಸಲ್ಲಿಸಿದ್ದರು.
ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ನಾಲ್ಕು ಕೊಠಡಿಗಳಿದ್ದು, ಅವುಗಳಲ್ಲಿ ಒಂದು ಇಲ್ಲಿ ವಾಸಿಸುತ್ತಿರುವ ವ್ಯಾಸ ಕುಟುಂಬದ ವಶದಲ್ಲಿದೆ. ವಂಶಪಾರಂಪರ್ಯವಾಗಿ ಪೂಜಾರಿಯಾಗಿರುವ ತಮಗೆ ಕೊಠಡಿ ಪ್ರವೇಶಿಸಿ ಪೂಜೆ ಪುನರಾರಂಭಿಸಲು ಅವಕಾಶ ನೀಡಬೇಕು ಎಂದು ವ್ಯಾಸರು ಕೋರ್ಟ್ಗೆ ಮನವಿ ಮಾಡಿದ್ದರು. ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾಗಿರುವ ಶಿವಲಿಂಗದ ಸ್ವರೂಪ ಹಾಗೂ ಲಕ್ಷಣಗಳನ್ನು ನಿರ್ಧರಿಸಲು ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ನಾಲ್ವರು ಹಿಂದೂ ಮಹಿಳೆಯರು ಸುಪ್ರೀಂ ಕೋರ್ಟ್ಗೆ ಜ.30ರಂದು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ರದ್ದುಗೊಳಿಸಿ 2023ರ ಮೇ 13 ರಂದು ನೀಡಿದ್ದ ಆದೇಶ ಹಾಗೂ ಶಿವಲಿಂಗದ ಕಾಲಮಾನವನ್ನು ಪತ್ತೆ ಹಚ್ಚಲು ಕಾರ್ಬನ್ ಡೇಟಿಂಗ್ ನಡೆಸುವಂತೆ 2023ರ ಮೇ 12ರಂದು ಅಲಹಬಾದ್ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಮುಂದೂಡಿರುವ ತನ್ನ ಆದೇಶವನ್ನು ರದ್ದುಗೊಳಿಸುವಂತೆ ಕೋರಲಾಗಿದೆ.