ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಸರಕಾರಿ ಪ.ಪೂ. ಕಾಲೇಜು ಆರಂಭಕ್ಕೆ ಅನುಮತಿ

ಮಂಗಳೂರು: ಕೆಲವು ವರ್ಷದಿಂದ ಪದ್ಮಶ್ರೀ ಹರೇಕಳ ಹಾಜಬ್ಬ ನಡೆಸುತ್ತಿರುವ ಪ್ರಯತ್ನಕ್ಕೆ ಯಶಸ್ಸು ದೊರೆತಿದ್ದು, ಅವರ ಬಹುದೊಡ್ಡ ಕನಸೊಂದು ನನಸಾಗಿದೆ. ರಾಜ್ಯ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ ಶಿಕ್ಷಣ)ಯ ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್.ಎನ್. ಅವರು ಹೊರಡಿಸಿದ ಆದೇಶದಲ್ಲಿ ಹರೇಕಳ ಹಾಜಬ್ಬರ ಸರಕಾರಿ ಪ್ರೌಢಶಾಲೆಯನ್ನು ಉನ್ನತೀಕರಿಸಿ ಹೊಸದಾಗಿ ಸರಕಾರಿ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲು ಸೂಚಿಸಲಾಗಿದೆ.

ಹರೇಕಳ ಹಾಜಬ್ಬರ ಪದವಿ ಪೂರ್ವ ಕಾಲೇಜು ತೆರೆಯುವ ಕನಸು ಇಂದು ನಿನ್ನೆಯದಲ್ಲ. ಕಳೆದ ಹಲವು ವರ್ಷದಿಂದ ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳ ಬೆನ್ನ ಹಿಂದೆ ಬಿದ್ದು ಅವರು ನಡೆಸಿದ ಪ್ರಯತ್ನದ ಫಲ ಇದಾಗಿದೆ.  ‘ಕಾಲೇಜಿಗೆ ಕಟ್ಟಡ ಬೇಡ. ಅದು ಮುಂದಿನ ವರ್ಷ ಕೊಡಿ. ಈ ವರ್ಷ ಅನುಮತಿ ಕೊಟ್ಟರೆ ಸಾಕು. ನಾನು ಯಾವುದಾದರೊಂದು ಮೂಲೆಯಲ್ಲಿ ಪದವಿ ಪೂರ್ವ ಕಾಲೇಜು ತರಗತಿ ನಡೆಸಲು ಪ್ರಯತ್ನಿಸುವೆ’ ಎಂಬ ಹಾಜಬ್ಬರ ಕಳಕಳಿಯ ಮನವಿಗೆ ಕೊನೆಗೂ ರಾಜ್ಯ ಸರಕಾರ ಸ್ಪಂದಿಸಿದೆ. ಹರೇಕಳ ಗ್ರಾಮದ ನ್ಯೂಪಡ್ಪುವಿನ ಮದ್ರಸವೊಂದರಲ್ಲಿ 1999-2000ರಲ್ಲಿ ಹಾಜಬ್ಬರು ಶಾಲೆಯೊಂದನ್ನು ತೆರೆದು ಅದನ್ನು ಉಳಿಸಿ- ಬೆಳೆಸಲು ಪಟ್ಟ ಶ್ರಮ ಅವಿಸ್ಮರಣೀಯ. ಹಾಗಾಗಿ ಇಂದು ಅವರು ದೇಶ-ವಿದೇಶಗಳಲ್ಲಿ ಮನೆ ಮಾತಾಗಿದ್ದು, ಅಕ್ಷರ ಸಂತ ಎನಿಸಿಕೊಂಡಿದ್ದಾರೆ. ಆರಂಭದಲ್ಲಿ ಪ್ರಾಥಮಿಕ ಬಳಿಕ ಪ್ರೌಢಶಾಲೆಯ ಒಂದೊಂದೇ ತರಗತಿಯನ್ನು ಏರಿಸಿಕೊಂಡು ಹೋದ ಹಾಜಬ್ಬರು ಇದೀಗ 2024-25ನೇ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಕಾಲೇಜು ಆರಂಭಿಸಲು ಸರಕಾರದಿಂದ ಅನುಮತಿ ಪಡೆದಿದ್ದಾರೆ.

 

LEAVE A REPLY

Please enter your comment!
Please enter your name here