ಮಂಗಳೂರು(ಬೆಂಗಳೂರು): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪರಿಚಯಿಸಿದ ನೂತನ ಬಸ್ಸಿಗೆ ‘ಅಶ್ವಮೇಧ’ ಎಂದು ಹೆಸರಿಟ್ಟವರು ಯಾರೋ ತಿಳಿಯದು. ಅಶ್ವಮೇಧ ಎಂದರೆ ‘ಕುದುರೆ ಬಲಿ’ ಎಂದರ್ಥ. ಇಲ್ಲಿ ಬಲಿಯಾಗುವುದು ಬಸ್ಸೋ…? ಅಥವಾ ಪ್ರಯಾಣಿಕರೋ…?’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಎಂಥ ಅಸೂಕ್ಷ್ಮ ಹೆಸರು! ಕನ್ನಡ ಅಥವಾ ಸಂಸ್ಕೃತ ಗೊತ್ತಿಲ್ಲದ ಯಾರೋ ಈ ಹೆಸರು ಪ್ರಸ್ತಾಪಿಸಿದ್ದಾರೆ. ಅದನ್ನು ಅವರಂತ ಮತ್ತೊಬ್ಬರು ಒಪ್ಪಿಗೆ ನೀಡಿದ್ದಾರೆ. ಸರಕಾರದಲ್ಲಿ ಇನ್ನೆಂತಹ ಅಜ್ಞಾನಿ ಮತ್ತು ಅವಿವೇಕಿಗಳು ಇದ್ದರೋ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸೇವೆಗೆ ಚಾಲನೆ ಕೊಡುವಾಗ ನಮ್ಮ ಕನ್ನಡ ವ್ಯಾಕರಣದ ಪ್ರಕಾಂಡ ಪಂಡಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಯಾವ ರೀತಿಯ ಮಾನಸಿಕ ಆಘಾತವಾಗಿರಬಹುದು? ಎಂದು ರವಿಕೃಷ್ಣಾ ರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈ ಕೂಡಲೇ ಇಂಥ ಅನರ್ಥಕಾರಿ ಹೆಸರನ್ನು ಬದಲಾಯಿಸಬೇಕು. ಬೇಕಾದರೆ ಕುದುರೆಸಾರೋಟು ಎಂದೋ, ಅಥವಾ ಸಂಸ್ಕೃತ ಮೂಲದ್ದೇ ಆಗಬೇಕು ಎಂದರೆ ಅಶ್ವಸಂಚಾರ ಎಂದೋ ಬದಲಾಯಿಸಿ ಎಂದು ಸಲಹೆ ನೀಡಿದ್ದಾರೆ.