ಮಂಗಳೂರು: ಒರಿಸ್ಸಾ ರಾಜ್ಯದಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಮಹೇಂದ್ರ ಬೊಲೆರೋ ವಾಹನದಲ್ಲಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿ 120 ಕೆ ಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಫೆ.6 ರಂದು ಮಂಗಳೂರು ನಗರಕ್ಕೆ ಒರಿಸ್ಸಾ ರಾಜ್ಯದಿಂದ ಮಹೇಂದ್ರ ಬೊಲೆರೋ ವಾಹನದಲ್ಲಿ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ನೇತೃತ್ವದ ಸಿಸಿಬಿ ಪೊಲೀಸರು ಉಳ್ಳಾಲದ ತಲಪಾಡಿ ಬಳಿಯ ಪಿಲಿಕೂರು ಎಂಬಲ್ಲಿ ಪತ್ತೆ ಹಚ್ಚಿ ವಾಹನದಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ವಯನಾಡಿನ ವೈತಿರಿ ಮೂಲಪಳಪ್ಪಿಲ್ ಹೌಸ್ ನಿವಾಸಿ ಅನೂಪ್ ಎಂ.ಎಸ್(28) ಮತ್ತು ಕಣ್ಣೂರಿನ ಇರಿಟ್ಟಿ ಪಡಿಯೂರಿನ ಪಡೆಯಂಗೋಡು ಕಿನಾಕುಲ್ ವಳಿಪಾತ್ ಹೌಸ್ ನಿವಾಸಿ ಲತೀಪ್ ಕೆ.ವಿ(36) ಎಂಬವರನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ವಶದಲ್ಲಿದ್ದ ಮಹೇಂದ್ರ ಬೊಲೆರೋ ಕಾರು, ರೂ. 28 ಲಕ್ಷ ಮೌಲ್ಯದ 120 ಕೆಜಿ ಗಾಂಜಾ, 3 ಮೊಬೈಲ್ ಫೋನ್, ನಗದು ರೂ. 4020/- ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಗಾಂಜಾ, ಮಹೇಂದ್ರ ಬೊಲೆರೋ ಜೀಪು, ಮೊಬೈಲ್ ಫೋನ್ ಗಳ ಒಟ್ಟು ಮೌಲ್ಯ ರೂ. 35,14,520/- ಎಂದು ಅಂದಾಜಿಸಲಾಗಿದೆ. ಆರೋಪಿಗಳು ಒರಿಸ್ಸಾದಿಂದ ಅಂಧ್ರಪ್ರದೇಶ, ಬೆಂಗಳೂರು ಮೂಲಕ ಗಾಂಜಾವನ್ನು ಕಾರಿನಲ್ಲಿರಿಸಿ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳಿಬ್ಬರೂ ಕೇರಳದ ರಾಜ್ಯದವರಾಗಿದ್ದು, ಕರ್ನಾಟಕ, ಕೇರಳ ಸಾರ್ವಜನಿಕರಿಗೆ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಒರಿಸ್ಸಾ ರಾಜ್ಯದಿಂದ ಗಾಂಜಾವನ್ನು ಖರೀದಿಸಿಕೊಂಡು ಮಂಗಳೂರು ನಗರಕ್ಕೆ ಹಾಗೂ ಕೇರಳಕ್ಕೆ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದರು. ಗಾಂಜಾವನ್ನು ಕಳ್ಳ ಸಾಗಾಣಿಕೆ ಮಾಡುವ ಉದ್ದೇಶದಿಂದಲೇ ಆರೋಪಿಗಳು ಬೋಲೆರೋ ವಾಹನದ ಹಿಂಬದಿಯ ಡಿಕ್ಕಿಯಲ್ಲಿ ಪ್ರತ್ಯೇಕವಾದ ಒಂದು ಕಬ್ಬಿಣದ ಬಾಕ್ಸ್ ನ್ನು ಮಾಡಿಕೊಂಡು ಈ ಬಾಕ್ಸ್ ನಲ್ಲಿ ಗಾಂಜಾವನ್ನು ಬಚ್ಚಿಟ್ಟಿದ್ದರು. ಈ ಬೃಹತ್ ಗಾಂಜಾ ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳ ಪೈಕಿ ಅನೂಪ್ ಎಂಬಾತನ ವಿರುದ್ದ ಈ ಹಿಂದೆ ಮೈಸೂರು ಜಿಲ್ಲೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2018 ನೇ ಇಸವಿಯಲ್ಲಿ ದರೋಡೆ ಪ್ರಕರಣವೊಂದು ದಾಖಲಾಗಿರುತ್ತದೆ. ಅಲ್ಲದೇ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಮೆಪ್ಪಳ್ಳಿ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸಾಗಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ, ವಯನಾಡು ಜಿಲ್ಲೆ ಕಲ್ಪಟ್ಟ ಪೊಲೀಸ್ ಠಾಣೆಯಲ್ಲಿ 2 ದರೋಡೆ ಪ್ರಕರಣ, ಒಂದು ಹಲ್ಲೆ ಪ್ರಕರಣ, ವಯನಾಡು ಜಿಲ್ಲೆಯ ಅಂಬಲವಯಲ್ ಪೊಲೀಸ್ ಠಾಣೆಯಲ್ಲಿ 2 ಕಳವು ಪ್ರಕರಣಗಳು ದಾಖಲಾಗಿರುತ್ತದೆ.