ಮಂಗಳೂರು(ನವದೆಹಲಿ): ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಮಂಡಿಸಬೇಕು ಎಂದು ಬಿಜೆಪಿಯವರು ಒತ್ತಾಯಿಸಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾಗಿರುವ ಅನುದಾನಗಳ ಕುರಿತು ವಿಧಾನಮಂಡಲದ ಅಧಿವೇಶನದಲ್ಲಿ ಶ್ವೇತಪತ್ರ ಮಂಡಿಸುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಸಂಸತ್ತಿನಲ್ಲಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಮಾತನಾಡಲೂ ಅವಕಾಶ ಕೊಡದೆ, ನಮ್ಮ ಧ್ವನಿ ಅಡಗಿಸುವ ಯತ್ನ ನಡೆದಿದೆ. ಜತೆಗೆ ಕೇಂದ್ರ ಸರ್ಕಾರ ರಾಜ್ಯದ ಪ್ರತಿ ಬಡವನ ಹೊಟ್ಟೆ ಮೇಲೆ ಹೊಡೆಯುತ್ತಿದೆ’ ಎಂದರು. ‘ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಮಾತಿನ ನಂತರ ಕಲಾಪ ಅಂತ್ಯಗೊಳಿಸಿ, ರಾಜ್ಯದ ಪರ ಧ್ವನಿ ಎತ್ತಲು ಸುರೇಶ್ ಅವರಿಗೆ ಅವಕಾಶ ಕೊಡದೆ ಅನ್ಯಾಯ ಮಾಡಲಾಗಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರಾಜ್ಯದ ಪರವಾಗಿ ಮಾತನಾಡದೆ ಪಕ್ಷಪಾತಿಯಾಗಿ ಮಾತನಾಡುತ್ತಿದ್ದರು. ನಮ್ಮ ಪಕ್ಷದ ಎಲ್ಲ ಸಚಿವರು, ಶಾಸಕರು, ಸಂಸದರು ದೆಹಲಿಗೆ ಬಂದು ರಾಜ್ಯದ ಪರ ದನಿ ಎತ್ತಿದರು. ಈ ಬಗ್ಗೆ ಬಿಜೆಪಿ ಸಂಸದರಿಗೆ ನಾಚಿಕೆಯಾಗಬೇಕು’ ಎಂದು ಕಿಡಿಕಾರಿದರು. ‘ಬರಪರಿಹಾರವಾಗಿ ರಾಜ್ಯಕ್ಕೆ ₹6 ಸಾವಿರ ಕೋಟಿಯನ್ನು ಮುಂಗಡವಾಗಿ ನೀಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಾಜ್ಯಕ್ಕೆ ಒಂದೇ ಒಂದು ರೂಪಾಯಿಯನ್ನು ಕೊಟ್ಟಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಅಧಿವೇಶನದಲ್ಲಿ ಉತ್ತರ ನೀಡಲಿದ್ದಾರೆ’ ಎಂದರು.