ಮಂಗಳೂರು(ದಾವಣಗೆರೆ): ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ತಾರತಮ್ಯ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರಿಗೆ ರಾಜಕೀಯ ಬಿಡುವ ಸವಾಲ್ ಹಾಕಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ಮರ್ಯಾದೆ ತೆಗೆದಿದ್ದಾರೆ ಎಂದು ಬಿಎಸ್ವೈ ಹೇಳಿದ್ದಾರೆ. ಹೇಳಿದ್ದಕ್ಕೆಲ್ಲ ಯಡಿಯೂರಪ್ಪ ತಲೆ ಅಲ್ಲಾಡಿಸಿದಂತೆ ನಾನು ತಲೆ ಅಲ್ಲಾಡಿಸ್ಬೇಕಾ? ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರೋದು ಸತ್ಯ ಸತ್ಯ. ಒಂದು ವೇಳೆ ನಾನು ಹೇಳಿದ್ದು ಸುಳ್ಳಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಸಹ ಬಿಡುಗಡೆ ಆಗಿಲ್ಲ. ಅಮಿತ್ ಶಾ ಜತೆ ಬಿಜೆಪಿ ನಾಯಕರು ಚರ್ಚಿಸಿ ಬಿಡುಗಡೆ ಮಾಡಿಸಿಲ್ಲ. ಯಡಿಯೂರಪ್ಪ, ಆಶೋಕ್, ಬೊಮ್ಮಾಯಿ, ವಿಜಯೇಂದ್ರ ಹೋಗಿ ಕೇಳಲಿ. ನಮಗೆ ಅನ್ಯಾಯವಾದರೆ ಪ್ರತಿಭಟಿಸಬಾರದಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರಾಜ್ಯದಿಂದ ನೂರು ರೂಪಾಯಿ ತೆರಿಗೆ ನೀಡಿದ್ರೆ ನಮಗೆ ಬರೊದು 12ರೂಪಾಯಿ ಮಾತ್ರ. ತೆರಿಗೆ ಕೊಡುವುದರಲ್ಲಿ ನಾವು 2 ನೇ ಸ್ಥಾನದಲ್ಲಿದ್ದೇವೆ. ಅದರೂ ನಮಗೆ ಕೊಡಬೇಕಾದ ಅನುದಾನ ಸಿಗುತ್ತಿಲ್ಲ. ಬರವನ್ನು ನಾವು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗಬಾರದು. ಮೇವು , ಉದ್ಯೋಗ ಕೊಡುತ್ತಿದ್ದೇವೆ. ಇದಕ್ಕಾಗಿಯೇ 850 ಕೋಟಿ ರೂಪಾಯಿ ನಿಧಿ ಇಡಲಾಗಿದೆ. ಗುಳೆ ಹೋಗದ ರೀತಿ ನೋಡಿಕೊಳ್ಳಲು ಡಿಸಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ತೆರಿಗೆ ಅನುದಾನದ ವಿಚಾರವಾಗಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ನಮ್ಮ ಪಾಲಿನ ತೆರಿಗೆ ಹಣವನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪಿಸಿದೆ. ಅಲ್ದೇ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ದೆಹಲಿಗೆ ತೆರಳಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮಾಡಿತ್ತು. ಈ ಮೂಲಕ ಕೇಂದ್ರ ಸರ್ಕಾರದ ಗಮನಸೆಳೆಯುವ ಕೆಲಸ ಮಾಡಿದೆ. ಆದ್ರೆ, ಇದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿ ನಾಯಕರೆಲ್ಲರೂ ಕಾಂಗ್ರೆಸ್ ಸರ್ಕಾರದ ಆರೋಪವನ್ನು ಅಲ್ಲಗೆಳೆದಿದೆ. ರಾಜ್ಯದ ತೆರಿಗೆ ಹಣ ಒಂದು ಪೈಸೆ ಸಹ ಬಾಕಿ ಇಟ್ಟುಕೊಂಡಿಲ್ಲ. ಎಲ್ಲವನ್ನೂ ಬಿಡುಗಡೆ ಮಾಡಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಈಗಾಗಲೇ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟಪಡಿಸಿದ್ದಾರೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ., ತೆರಿಗೆ ಹಣದ ಬಗ್ಗೆ ನಾನು ಮಾಡಿದ ಆರೋಪ ಸುಳ್ಳಾದರೆ ರಾಜಕೀಯ ಬಿಡುತ್ತೇನೆ ಎಂದು ಬಿಜೆಪಿ ನಾಯಕರಿಗೆ ಸವಾಲ್ ಎಸೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಅಂಕಿ-ಅಂಶ ದಾಖಲೆ ಬಿಡುಗಡೆ ಮಾಡುತ್ತಾರಾ? ಬಿಜೆಪಿ ನಾಯಕರು ಸಿದ್ದರಾಂಯ್ಯನವರ ಸವಾಲ್ ಸ್ವೀಕರಿಸುತ್ತಾರಾ? ಎನ್ನುವುದನ್ನು ಕಾದುನೋಡಬೇಕಿದೆ.