ಮಂಗಳೂರು(ಮೂಲ್ಕಿ): ಮಂಗಳೂರು ಕಮಿಷನರೇಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳು ವಶಪಡಿಸಿಕೊಂಡ ₹ 69.17 ಲಕ್ಷ ಮೌಲ್ಯದ ಗಾಂಜಾ ಹಾಗೂ ಇತರ ಮಾದಕ ವಸ್ತುಗಳನ್ನು ಕಾರ್ನಾಡು ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಫೆ.9ರಂದು ನಾಶಪಡಿಸಲಾಯಿತು.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ನೇತೃತ್ವದಲ್ಲಿ ಮಾದಕ ಪದಾರ್ಥ ನಿಷೇಧ ದಿನಾಚರಣೆ ಅಂಗವಾಗಿ ಕಾರ್ಯಾಚರಣೆ ನಡೆಯಿತು. ಜಿಲ್ಲೆಯ ಐದು ಠಾಣೆಗಳ 8 ಪ್ರಕರಣ ಮತ್ತು ಕಮಿಷನರೇಟ್ ವ್ಯಾಪ್ತಿಯ ಠಾಣೆಗಳ 34 ಪ್ರಕರಣದಲ್ಲಿ ವಶಪಡಿಸಿಕೊಂಡ ₹ 69.17 ಲಕ್ಷ ರೂ ಮೌಲ್ಯದ ಗಾಂಜಾ ಹಾಗೂ 243 ಗ್ರಾಂ ಎಂಡಿಎಂಎ ನಾಶಪಡಿಸಲಾಯಿತು. ಅಧಿಕಾರಿಗಳಾದ ದಿನೇಶ್ ಕುಮಾರ್, ರವೀಶ್ ನಾಯಕ್, ಮನೋಜ್ ಕುಮಾರ್, ರಿಷ್ಯಂತ್ ಕುಮಾರ್, ರಾಜೇಂದ್ರ ಹಾಗೂ ಮೂಲ್ಕಿ ಠಾಣೆಯ ವಿದ್ಯಾಧರ್, ಕಾರ್ನಾಡಿನ ಬಯೊ ಸಂಸ್ಥೆ ಸಸ್ಟೇನಬಿಲಿಟಿ ಹೆಲ್ತ್ ಕೇರ್ ಸೊಲ್ಯೂಷನ್ಸ್ ಪ್ರಬಂಧಕ ಪ್ರಶಾಂತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.