ಮಂಗಳೂರು(ಲಕ್ನೊ): ಕಳೆದು ಹೋಗಿದ್ದ ಪುತ್ರನ ರೂಪದಲ್ಲಿ ಕುಟುಂಬವೊಂದಕ್ಜೆ ಮರಳಿದ್ದ ಸನ್ಯಾಸಿ ರೂಪದ ವಂಚಕನ ಮುಖವಾಡ ಕಳಚಿಬಿದ್ದಿದೆ. ಈ ಸಂಬಂಧ ಕುಟುಂಬದ ಸದಸ್ಯರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ನಡೆದ ಈ ನೈಜ್ಯ ಘಟನೆ ಬಾಲಿವುಡ್ ಬ್ಲಾಕ್‌ಬಸ್ಟರ್ ಸಿನಿಮಾದಂತೆ ಕಂಡುಬಂದಿದೆ. ದಿಲ್ಲಿ ನಿವಾಸಿಗಳಾದ ಭಾನುಮತಿ ಸಿಂಗ್ ಹಾಗೂ ಅಕೆಯ ಪತಿ ರತಿಪಾಲ್ ಸಿಂಗ್‌ರ ಪುತ್ರ ಪಿಂಕು 22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ. ಅತ 11 ವರ್ಷ ವಯಸ್ಸಿನವನಾಗಿದ್ದಾಗ, ಅತಿಯಾಗಿ ಆಟವಾಡಬೇಡ ಎಂದು ತನ್ನ ತಾಯಿ ಭಾನುಮತಿ ಸಿಂಗ್ ಬೈದಿದ್ದರಿಂದ ಮುನಿಸಿಕೊಂಡು 2002ರಲ್ಲಿ ಮನೆ ತೊರೆದವನು ಇದುವರೆಗೂ ಪತ್ತೆಯಾಗಿರಲಿಲ್ಲ.
ಕೆಲವು ದಿನಗಳ ಹಿಂದೆ ಭಾನುಮತಿ ಸಿಂಗ್ ಹಾಗೂ ಆಕೆಯ ಪತಿ ರತಿಪಾಲ್ ಸಿಂಗ್ ಅವರಿಗೆ ತಪಸ್ವಿಯೊಬ್ಬರು ರತಿಪಾಲ್‌ರ ಸ್ವಗ್ರಾಮವಾದ ಅಮೇಥಿಯಲ್ಲಿನ ಖರೌಲಿ ಗ್ರಾಮಕ್ಕೆ ಮರಳಿ ಬರುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ ಹಾಗೂ ಆತ ನೋಡಲು ಪಿಂಕುವಿನ ತದ್ರೂಪಿನಂತೆಯೇ ಇದ್ದರು. ಖರೌಲಿ ಗ್ರಾಮದಲ್ಲಿ ವಾಸಿಸುತ್ತಿರುವ ರತಿಪಾಲ್ ಸಿಂಗ್‌ರ ಸೋದರಿ ಸೇರಿದಂತೆ ಅವರ ಸಂಬಂಧಿಕರೆಲ್ಲರೂ ಖರೌಲಿ ಗ್ರಾಮಕ್ಕೆ ತಕ್ಷಣವೇ ಬರುವಂತೆ ರತಿಪಾಲ್ ಸಿಂಗ್ ಹಾಗೂ ಭಾನುಮತಿ ಸಿಂಗ್ ಅವರಿಗೆ ಕರೆ ಕಳಿಸಿದ್ದಾರೆ. ಅವರಿಬ್ಬರೂ ಗ್ರಾಮಕ್ಕೆ ತೆರಳಿದಾಗ, ಆ ತಪಸ್ವಿಯು ನಾನೇ ನಿಮ್ಮ ನಿಜವಾದ ಪುತ್ರ ಎಂದು ಹೇಳಿಕೊಂಡಿದ್ದಾನೆ. ರಾಜನೊಬ್ಬ ಸನ್ಯಾಸಿಯಾಗಲು ಹೇಗೆ ರಾಜ್ಯ ತೊರೆದ ಎಂಬ ಜನಪದ ಗೀತೆಯನ್ನು ಹಾಡುತ್ತಾ, ಸನ್ಯಾಸಿಯೊಬ್ಬ ಭಾನುಮತಿಯಿಂದ ಭಿಕ್ಷೆ ಬೇಡುತ್ತಿರುವ ವಿಡಿಯೊ ವೈರಲ್ ಆಗಿತ್ತು. ಈಗ ಈ ಕತೆಗೆ ಟ್ವಿಸ್ಟ್ ಸಿಕ್ಕಿದ್ದು ಪಿಂಕುವಿನ ನಕಲಿ ಮುಖ ಬಹಿರಂಗಗೊಂಡಿದೆ.
ನಾನು ಸನ್ಯಾಸ ಸ್ವೀಕರಿಸಿದ್ದೇನೆ ಎಂದು ಅಲ್ಲಿದ್ದವರಿಗೆಲ್ಲ ತಿಳಿಸಿರುವ ಪಿಂಕು, ಜಾರ್ಖಂಡ್‌ನಲ್ಲಿರುವ ಪಾರಸ್‌ನಾಥ್ ಮಠಕ್ಕೆ ತಾನು ಮರಳಬೇಕು ಎಂದು ತಿಳಿಸಿದ್ದಾನೆ. ಹೀಗೆ ಮಾಡಲು ನೀನು ಅಯೋಧ್ಯೆಗೆ ಭೇಟಿ ನೀಡಿ, ನಿನ್ನ ಕುಟುಂಬದ ಸದಸ್ಯರಿಂದ ಭಿಕ್ಷೆ ಪಡೆದ ನಂತರವಷ್ಟೆ ಪೂರ್ಣಗೊಳ್ಳಲಿದೆ ಎಂದು ನನ್ನ ಗುರುಗಳು ಹೇಳಿದ್ದಾರೆ ಎಂದು ಆತ ಅವರಿಗೆಲ್ಲ ಹೇಳಿದ್ದಾನೆ. ಆದರೆ, ಆತ ಮತ್ತೆ ತನ್ನ ಮಠಕ್ಕೆ ಮರಳುವುದನ್ನು ಪಿಂಕು ಪೋಷಕರು ಆರಂಭದಲ್ಲಿ ವಿರೋಧಿಸಿದ್ದಾರಾದರೂ, ಆತ ತನ್ನ ಮಾರ್ಗದ ಬಗ್ಗೆ ದೃಢ ನಿಶ್ಚಯ ಮಾಡಿದ್ದಾನೆ ಎಂಬ ಅರಿವಾದ ನಂತರ, ಆತ ಅಲ್ಲಿಂದ ತೆರಳಲು ಅವಕಾಶ ನೀಡಿದ್ದಾರೆ. ಗ್ರಾಮಸ್ಥರು ಒಟ್ಟಾಗಿ ಆತನಿಗೆ 11 ಕ್ವಿಂಟಾಲ್ ಆಹಾರ ಧಾನ್ಯ ಉಡುಗೊರೆ ನೀಡಿದ್ದು, ರತಿಪಾಲ್ ಸಿಂಗ್‌ರ ಸಹೋದರಿ ಕೂಡಾ ಆತನಿಗೆ ರೂ. 11,000 ನಗದನ್ನು ನೀಡಿದ್ದಾರೆ. ಪಿಂಕುಗೆ ಹೊಸ ಫೋನ್ ಒಂದನ್ನು ಕೊಡಿಸಿರುವ ರತಿಪಾಲ್ ಸಿಂಗ್, ತಮ್ಮೊಂದಿಗೆ ಸಂಪರ್ಕದಲ್ಲಿರುವಂತೆ ಸೂಚಿಸಿದ್ದಾರೆ. ಫೆಬ್ರವರಿ 1 ರಂದು ಪಿಂಕು ಗ್ರಾಮ ತೊರೆದಿದ್ದಾನೆ.
ಪಿಂಕು ಗ್ರಾಮವನ್ನು ತೊರೆದ ನಂತರ ರತಿಪಾಲ್ ಸಿಂಗ್‌ಗೆ ಕರೆ ಮಾಡಿರುವ ಪಿಂಕು, ನನಗೆ ನಿಮ್ಮ ಬಳಿಗೆ ಮರಳುವ ಆಸೆಯಿದ್ದರೂ, ನಾನು ನನ್ನ ಮಠದವರಿಗೆ ರೂ. 10 ಲಕ್ಷ ನೀಡುವವರೆಗೂ ಹಾಗೆ ಮಾಡುವಂತಿಲ್ಲ ಎಂದು ಮಠದ ಜನರು ಹೇಳುತ್ತಿದ್ದಾರೆ. ಸನ್ಯಾಸಿಯೊಬ್ಬ ಕುಟುಂಬ ಜೀವನಕ್ಕೆ ಮರಳಲು ಪಾವತಿಸಬೇಕಾದ ಬೆಲೆಯಿದು ಎಂದು ಹೇಳಿದ್ದಾನೆ. ತನ್ನ ಪುತ್ರ ಹೇಗಾದರೂ ಮನೆಗೆ ಮರಳಲಿ ಎಂಬ ಹತಾಶೆಯಲ್ಲಿ ರತಿಲಾಲ್ ಸಿಂಗ್ ಗ್ರಾಮದಲ್ಲಿದ್ದ ತಮ್ಮ ಜಮೀನನ್ನು ರೂ. 11.20 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ನಂತರ ಆ ಹಣವನ್ನು ಮಠಕ್ಕೆ ನೀಡಲು ನಾನು ಜಾರ್ಖಂಡ್‌ಗೆ ಬರುತ್ತಿದ್ದೇನೆ ಎಂದು ಪಿಂಕುಗೆ ತಿಳಿಸಿದ್ದಾರೆ.ಆದರೆ ಪಿಂಕು ಹಲವಾರು ನಂಬಿಕೆಗೆ ಅರ್ಹವಲ್ಲದ ಕಾರಣಗಳನ್ನು ನೀಡಿ, ಮೊತ್ತವನ್ನು ಬ್ಯಾಂಕ್ ಅಥವಾ ಯುಪಿಐ ಮೂಲಕ ವರ್ಗಾಯಿಸುವಂತೆ ರತಿಪಾಲ್ ಸಿಂಗ್ ಮೇಲೆ ಒತ್ತಡ ಹೇರಿದ್ದಾನೆ.ಪಿಂಕು ವರ್ತನೆಯಿಂದ ಅನುಮಾನಗೊಂಡಿರುವ ರತಿಪಾಲ್ ಸಿಂಗ್, ಆತನ ಮಠದ ಕುರಿತು ವಿಚಾರಣೆಯನ್ನು ಆರಂಭಿಸಿದಾಗ, ಪಾರಸ್‌ನಾಥ್ ಮಠ ಎಂಬ ಯಾವುದೇ ಹಿಂದೂ ಮಠವು ಜಾರ್ಖಂಡ್‌ನಲ್ಲಿಲ್ಲ ಎಂಬ ಸಂಗತಿ ತಿಳಿದು ಬಂದಿದೆ. ಈ ಕುರಿತು ರತಿಪಾಲ್ ಸಿಂಗ್ ಶನಿವಾರ ಅಮೇಥಿ ಜಿಲ್ಲೆಯಲ್ಲಿನ ಜೈಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ಸ್ವೀಕರಿಸಿದ ತಿಲೋಯಿ ಪೊಲೀಸ್ ವೃತ್ತಾಧಿಕಾರಿ ಅಜಯ್ ಕುಮಾರ್ ಸಿಂಗ್ ಪಿಂಕುವಿನಂತೆ ಸೋಗು ಹಾಕಿ, ಭಾನುಮತಿ ಸಿಂಗ್ ಹಾಗೂ ರತಿಪಾಲ್ ಸಿಂಗ್ ಕುಟುಂಬಕ್ಕೆ ವಂಚಿಸಲು ಯತ್ನಿಸಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. ಗೊಂಡಾ ಜಿಲ್ಲೆಯ ನಫೀಸ್ ಎಂಬಾತ ಪಿಂಕುವಿನಂತೆ ನಟಿಸಿ ಕುಟುಂಬಕ್ಕೆ ವಂಚಿಸಿರುವುದು ಬಯಲಾಗಿದೆ. ಈತನ ಸಹೋದರ ರಶೀದ್ ಎಂಬಾತ ಕೂಡಾ 2021ರಲ್ಲಿ ಇದೇ ರೀತಿ ತಪಸ್ವಿಯಂತೆ ನಟಿಸಿ, ಕುಟುಂಬವೊಂದಕ್ಕೆ ವಂಚಿಸಿರುವುದು ತನಿಖೆಯ ವೇಳೆ ಬಯಲಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ ಎಂದು ವೃತ್ತಾಧಿಕಾರಿ ಅಜಯ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.