ಮಂಗಳೂರು(ವಿಜಯನಗರ): ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಕೋಳಿಗೆ ಟಿಕೆಟ್ ತೆಗೆದುಕೊಳ್ಳುವ ವಿಚಾರದಲ್ಲಿ ಬಸ್ಸಿನ ಕಂಡೆಕ್ಟರ್ ಮತ್ತು ಮಹಿಳೆಯೊಬ್ಬರ ನಡುವೆ ವಾಗ್ವಾದ ನಡೆದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದಿದೆ.
ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಕಂಡಕ್ಟರ್ ಮತ್ತು ಮಹಿಳೆ ನಡುವೆ ಫೆ.11ರ ರಾತ್ರಿ ಈ ಜಗಳ ನಡೆದಿದೆ. ಧರ್ಮಸ್ಥಳಕ್ಕೆ ತೆರಳುತ್ತಿದ್ದ ಹಗರಿಬೊಮ್ಮನಹಳ್ಳಿ ಘಟಕದ ಸಾರಿಗೆ ಬಸ್ ಹೊಸಪೇಟೆ ಮಾರ್ಗವಾಗಿ ಕೂಡ್ಲಿಗಿ ಪಟ್ಟಣಕ್ಕೆ ಬಂದಾಗ ಜಗಳೂರು ಕಡೆಗೆ ಹೋಗಲು ಮಹಿಳೆಯೊಬ್ಬರು ಬಸ್ ಹತ್ತಿದ್ದಾರೆ. ಈ ವೇಳೆ ಜನರಿಗೆ ಕಾಣದಂತೆ ರಟ್ಟಿನ ಬಾಕ್ಸ್ ನಲ್ಲಿ ಇಟ್ಟಿದ್ದ ಕೋಳಿ ಕೂಗಿದೆ. ಇದಕ್ಕೆ ಕಂಡಕ್ಟರ್ ಕೋಳಿ ಯಾರದೆಂದು ಕೇಳಿ ಟಿಕೆಟ್ ಪಡೆಯಲು ಹೇಳಿದ್ದಾರೆ. ಈ ವೇಳೆ ಟಿಕೆಟ್ ಪಡೆದುಕೊಳ್ಳಲು ಮಹಿಳೆ ಒಪ್ಪಿಕೊಂಡಿದ್ದಾರೆ. ಅಲ್ಲದೇ ಟಿಕೆಟ್ ಪಡೆದರೆ ತನ್ನ ಕೋಳಿಗೆ ಕುಳಿತುಕೊಳ್ಳಲು ಸೀಟ್ ಕೊಡಬೇಕು ಎಂದು ಮಹಿಳೆ ಪಟ್ಟು ಹಿಡಿದಿದ್ದಾರೆ.
ಕೋಳಿಗೆ ಕೂಡ ಟಿಕೆಟ್ ಕೊಡಬೇಕು ಎಂದು ಕಂಡೆಕ್ಟರ್ ಕೇಳಿದಾಗ, ನೀನ್ಯಾವ ಸೀಮೆ ಕಂಡೆಕ್ಟರ್, ಕೋಳಿಗೆ ಯಾರಾದ್ರೂ ಟಿಕೆಟ್ ತೆಗೆಯುತ್ತಾರಾ? ಎಂದು ಮಹಿಳೆ ಪ್ರಶ್ನೆ ಮಾಡಿದ್ದಾರೆ. ರೂಲ್ಸ್ ಪ್ರಕಾರ ಕೋಳಿಗೆ ಆಫ್ ಟಿಕೆಟ್ ತಗೋಬೇಕು. ಇಲ್ಲ ಅಂದ್ರೆ ಕೋಳಿ ಹಿಡ್ಕೊಂಡು ಕೆಳಗಿಳಿ ತಾಯಿ ಎಂದು ಕಂಡಕ್ಟರ್ ಹೇಳುತ್ತಿದ್ದಂತೆ ಟಿಕೆಟ್ ತೆಗೆಯಲು ಒಪ್ಪಿಕೊಂಡ ಮಹಿಳೆ ಕೋಳಿಗೆ ಸೀಟು ಕೊಡಬೇಕೆಂದು ಎಂದು ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಬಸ್ಸಿನ ಇತರ ಪ್ರಯಾಣಿಕರು ಮಹಿಳೆಗೆ ಬಸ್ಸಿನ ನಿಯಮದ ಬಗ್ಗೆ ಹೇಳಿದರೂ ಆಕೆ ಅದನ್ನು ಕೇಳದೆ ತಮ್ಮ ವಾದ ಮುಂದುವರಿಸಿದ್ದಾರೆ. ಮಹಿಳೆಯ ಬೇಡಿಕೆ ನ್ಯಾಯಯುತವಾದರೂ, ಉತ್ತರ ಕೊಡಬೇಕಾದವರು ಸುಮ್ಮನಾಗಿದ್ದಾರೆ.