ಹಿಂದೂ ಧರ್ಮದ ಅವಹೇಳನ – ಶಿಕ್ಷಕಿ ವಜಾ ಪ್ರಕರಣ: ಶಾಲೆಗೆ ಮಾಜಿ ಸಚಿವ ರೈ, ಸೊರಕೆ ಭೇಟಿ-

ಮಂಗಳೂರು:  ತರಗತಿಯಲ್ಲಿ ಶ್ರೀರಾಮ ಹಾಗೂ ಹಿಂದೂ ಧರ್ಮದ ಅವಹೇಳನ ಮಾಡಿದ್ದಾರೆನ್ನಲಾದ ಶಿಕ್ಷಕಿಯನ್ನು ವಜಾ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ವಲೆನ್ಸಿಯಾದ ಶಾಲೆಗೆ ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವರಾದ ರಮಾನಾಥ ರೈ ಹಾಗೂ ವಿನಯ ಕುಮಾರ್‌ ಸೊರಕೆ ಭೇಟಿ ನೀಡಿದರು.

ಶಾಲಾ ಆಡಳಿತದೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮಾನಾಥ ರೈ, ಸಂಸ್ಥೆಯ ಮುಖ್ಯಸ್ಥರನ್ನು ಭೇಟಿಯಾಗಿದ್ದೇವೆ, ಸರಕಾರ ಘಟನೆ ಬಗ್ಗೆ ಒಂದು ಸತ್ಯಶೋಧನ ಸಮಿತಿ ರಚಿಸಿ ತನಿಖೆ ಮಾಡಲಿ ಎಂದಿದ್ದಾರೆ. ಮಕ್ಕಳನ್ನು ರಾಜಕೀಯಕ್ಕೆ ಬಳಸಬಾರದು, ಅದರ ಬಗ್ಗೆಯೂ ತನಿಖೆ ಆಗಲಿ. ಮಕ್ಕಳನ್ನು ದುರುಪಯೋಗ ಪಡಿಸಿಕೊಂಡಿದ್ದರೆ, ಅದರ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆ ತನಿಖೆ ಮಾಡಲಿ. ವಿದ್ಯಾಸಂಸ್ಥೆ ಬಗ್ಗೆ ದೊಡ್ಡ ಪ್ರಚಾರ ಆಗಿದೆ. ಅದರ ಸತ್ಯಾಸತ್ಯತೆ ವಿಮರ್ಶೆ ನಾವು ಮಾಡಬೇಕಿದೆ. ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಉಳಿಯಬೇಕು. ಶಿಕ್ಷಣ ಇಲಾಖೆ ಯಾವುದೇ ಪ್ರಚೋದನೆಗೆ ಒಳಗಾಗದೇ ತನಿಖೆ ನಡೆಸಲಿ ಎಂದರು.

ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ಪ್ರಕರಣದ ಸತ್ಯಾಸತ್ಯತೆ ಅರಿಯುವುದಕ್ಕಾಗಿ ಶಾಲೆಗೆ ಕಾಂಗ್ರೆಸ್‌ ನಿಯೋಗ ಭೇಟಿ ನೀಡಿದೆ. ಆ ದೃಷ್ಟಿಯಲ್ಲಿ ಸಂಬಂಧಪಟ್ಟ ಇಲಾಖೆ ಪ್ರತ್ಯೇಕ ವ್ಯವಸ್ಥೆಯ ಮೂಲಕ ಸಮಗ್ರ ತನಿಖೆ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದರು. ಕೆಪಿಸಿಸಿ ವಕ್ತಾರೆ ಫರ್ಜಾನಾ, ಮಾಜಿ ಶಾಸಕ ಜೆ.ಆರ್‌. ಲೋಬೊ, ಮಮತಾ ಗಟ್ಟಿ, ಶಶಿಧರ ಹೆಗ್ಡೆ, ಶಾಹುಲ್‌ ಹಮೀದ್‌, ಶಾಲೆಟ್‌ ಪಿಂಟೋ, ಭಾಸ್ಕರ ಮೊಯ್ಲಿ, ವಿಶ್ವಾಸ್‌ ದಾಸ್‌ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here