ಮಂಗಳೂರು(ಬೆಂಗಳೂರು): ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಬಜೆಟನ್ನು ಇಂದು ಮಂಡಿಸಿದ್ದು, ಕರಾವಳಿ ಜಿಲ್ಲೆಗಳಿಗೆ ನೀಡಿರುವ ಪ್ರಮುಖ ಕೊಡುಗೆಗಳ ವಿವರ ಇಂತಿವೆ.
- ಸಮುದ್ರ ಮೀನುಗಾರಿಕೆಗೆ ತೆರಳಿದಾಗ ಅಪಘಾತ ಅಥವಾ ಅನಾರೋಗ್ಯಕ್ಕಿ ತುತ್ತಾಗುವ ಮೀನುಗಾರರನ್ನು ತ್ವರಿತವಾಗಿ ದಡಕ್ಕೆ ತರಲು ಏಳು ಕೋಟಿ ರೂ. ವೆಚ್ಚದಲ್ಲಿ ‘ಸಮುದ್ರ ಆ್ಯಂಬುಲೆನ್ಸ್’ ವ್ಯವಸ್ಥೆ.
- ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ಸ್ಥಾಪನೆ.
- ಮಂಗಳೂರು ನಗರದ ಸಮೀಪ ಇಂಟಿಗ್ರೇಟೆಡ್ ಟೌನ್ ಶಿಪ್ ಅಭಿವೃದ್ಧಿ.
- ಮಂಗಳೂರು ಬಂದರ್ ನಿಂದ ಬೆಂಗಳೂರು ವರೆಗೆ ಆರ್ಥಿಕ ಅಭಿವೃದ್ಧಿ ಕಾರಿಡಾರ್ ನಿರ್ಮಾಣ.
- ಉತ್ತರ ಕನ್ನಡ ಜಿಲ್ಲೆಯ ಕೇಣಿಯಲ್ಲಿ 4,200 ಕೋ.ರೂ. ಅಂದಾಜು ಯೋಜನಾ ವೆಚ್ಚದಲ್ಲಿ ಹೊಸ ಆಳ ಸಮುದ್ರ ಸರ್ವ ಋತು ಬಂದರು ಸ್ಥಾಪನೆ.
- ಹೊನ್ನಾವರ ತಾಲೂಕಿನ ಮಂಕಿ/ ಕಾಸರಕೋಡದಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆ.
- ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ಸುಸಜ್ಜಿತ ಮೀನುಗಾರಿಕಾ ಹೊರ ಬಂದರು ನಿರ್ಮಾಣ.
- ಮತ್ಸ್ಯ ಆಶಾಕಿರಣ ಯೋಜನೆಯಡಿ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಕರಾವಳಿಯ ಮೀನುಗಾರರಿಗೆ ನೀಡುತ್ತಿರುವ ಪರಿಹಾರ ಮೊತ್ತದ ರಾಜ್ಯದ ಪಾಲ 1500 ರೂ.ನಿಂದ 3 ಸಾವಿರ ರೂ.ಗೆ ಹೆಚ್ಚಳ.
- ಮಾವಿನಕುರ್ವೆಯಲ್ಲಿ ಪಿಪಿಪಿ ಮಾದರಿಯಲ್ಲಿ 3048 ಕೋ.ರೂ. ಯೋಜನಾ ವೆಚ್ಚದಲ್ಲಿ 2ನೇ ಬೃಹತ್ ಬಂದರ್ ಅಭಿವೃದ್ಧಿಗೆ ಅಂತಾರಾಷ್ಟ್ರೀಯ ಟೆಂಡರ್.
- 10 ಸಾವಿರ ವಸತಿರಹಿತ ಮೀನುಗಾರರಿಗೆ ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಹಾಯಧನ
- ಉಡುಪಿಯಲ್ಲಿ ಸ್ವಯಂಚಾಲಿತಾ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣ.
- ಸಾಗರಮಾಲಾ ಯೋಜನೆಯಡಿ ರಾಜ್ಯದ ಪಾಲು 530 ಕೋ.ರೂ. ಅನುದಾನದೊಂದಿಗೆ ಒಟ್ಟು 1,017 ಕೋ.ರೂ. ವೆಚ್ಚದಲ್ಲಿ ಒಟ್ಟು 26 ಕಾಮಗಾರಿಗಳ ಅನುಷ್ಠಾನ.
- 10 ಕೋಟಿ ರೂ. ವೆಚ್ಚದಲ್ಲಿ ಮಂಗಳೂರಿನ ಹಜ್ ಭವನದ ನಿರ್ಮಾಣ ಕಾಮಗಾರಿ.