ಮಂಗಳೂರು: ಮಂಗಳೂರಿನ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದೂ ಧರ್ಮ ನಿಂದನೆ ಮಾಡಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ರಾಜಕೀಯ ಮಾಡುವುದು ಸರಿಯಲ್ಲ, ಗೇಟಿನ ಬಳಿ ನಿಲ್ಲಿಸಿ ಶಾಲೆಯ ಮಕ್ಕಳನ್ನು ರಾಜಕೀಯ ಪಕ್ಷದ ನಾಯಕರು ಬಳಸಿಕೊಂಡಿರುವುದನ್ನು ವಿರೋಧಿಸುತ್ತೇನೆ ಎಂದು ಮಕ್ಕಳ ಹಕ್ಕಿನ ಆಯೋಗದ ಮಾಜಿ ಅಧ್ಯಕ್ಷೆ ಡಾ. ಕೃಪಾ ಅಮರ್ ಆಳ್ವ ಹೇಳಿದ್ದಾರೆ.
ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಘಟನೆಯ ಬಗ್ಗೆ ಯಾರು ತಪ್ಪು, ಯಾರು ಸರಿ ಎಂಬ ಕುರಿತು ನಾನು ಮಾತನಾಡುವುದಿಲ್ಲ. ಇದು ಮಕ್ಕಳ ಸ್ವಾತಂತ್ರ್ಯ ಮತ್ತು ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂದರು. ಶಾಲಾ ನಿಯಮದ ಪ್ರಕಾರ ಮಕ್ಕಳನ್ನು ಮುಂದಿಟ್ಟು ಶಾಲೆಯ ಅವರಣದೊಳಗೆ ಪ್ರತಿಭಟಿಸುವುದಾಗಲಿ, ಗೇಟ್ ಬಂದ್ ಮಾಡಿ ಅವರನ್ನು ಅಲ್ಲಿಯೇ ತಡೆದು ಪ್ರತಿಭಟಿಸಲು ಬಳಸುವುದು ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕಿನ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಡಾ. ಮೆಟಿಲ್ಡಾ ಡಿಸೋಜಾ, ಪಾಯಿಸ್ ಉಪಸ್ಥಿತರಿದ್ದರು.