ಫೆ. 25 ರಿಂದ 27ರವರೆಗೆ ಉಳ್ಳಾಲದ ಕಲ್ಲಾಪುವಿನಲ್ಲಿ ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನ

ಮಂಗಳೂರು: ಡಿವೈಎಫ್ಐ 12ನೇ ಕರ್ನಾಟಕ ರಾಜ್ಯ ಸಮ್ಮೇಳನವು  ʼʼಸಾಮರಸ್ಯ,ಉದ್ಯೋಗ, ಘನತೆಯ ಬದುಕಿಗಾಗಿ” ಎಂಬ ಘೋಷಣೆಯೊಂದಿಗೆ ಫೆ. 25 ರಿಂದ 27ರವರೆಗೆ ಉಳ್ಳಾಲದ ಕಲ್ಲಾಪುವಿನಲ್ಲಿರುವ ಯುಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿ‌ ಮಾಹಿತಿ ನೀಡಿದ ಅವರು ಫೆ.25 ರಂದು ಬೆಳಗ್ಗೆ 10 ಗಂಟೆಗೆ ಯುನಿಟಿ ಸಭಾಂಗಣದ ಪ್ರೊಫೆಸರ್ ಅಮೃತ ಸೋಮೇಶ್ವರ ವೇದಿಕೆ, ಡಾ. ವಿಠಲ್ ಭಂಡಾರಿ ಸಭಾಂಗಣದಲ್ಲಿ ಕಾಂ.ನಾಗೇಶ್ ಕುಮಾರ್ ನಗರದಲ್ಲಿ ನಡೆಯಲಿದ್ದು, ಕರ್ನಾಟಕದ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿವೈಎಫ್ಐ ಅಖಿಲ ಭಾರತ ಅಧ್ಯಕ್ಷರು, ರಾಜ್ಯ ಸಭಾ ಸದಸ್ಯರಾದ ಕಾಂ. ಎ.ಎ ರಹೀಮ್, 12ನೇ ಕರ್ನಾಟಕ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರು ನಿವೃತ್ತ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಭಾಗವಹಿಸಲಿದ್ದು, ಸಂಜೆ 7 ಗಂಟೆಗೆ ರಾಜ್ಯದ ಮಟ್ಟದ ಪ್ರಶಸ್ತಿ ವಿಜೇತ ಪಿವೈಎಂ ಟ್ರೂಪ್ಸ್ ಬಜಾಲ್ ಹಾಗೂ ಸೌಹಾರ್ದ ಕಲಾವಿದರು ಕುತ್ತಾರು ಇವರಿಂದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ನಡೆಯಲಿದೆ.

ಫೆ. 26 ಸೋಮವಾರದಂದು ದೆಹಲಿ ಜೆಎನ್ ಯು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆಯವರಿಂದ ʼಕರಾವಳಿ ಕಟ್ಟಿದ ಬಗೆʼ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನಡೆಯಲಿದೆ. ಫೆ. 27ರಂದು ರಾಜ್ಯ ಸಮ್ಮೇಳನದ ಸಮಾರೋಪದಲ್ಲಿ 3 ಗಂಟೆಗೆ ಕುತ್ತಾರ್ ಜಂಕ್ಷನ್ ನಿಂದ ಕಲ್ಲಾಪು ಯುಬಿಟಿ ಸಭಾಂಗಣ ಮೈದಾನದವರೆಗೆ ಯುವಜನರ ವರ್ಣರಂಜಿತ ಮೆರವಣಿಗೆ, ಯೂತ್ ಮಾರ್ಚ್ ಮತ್ತು ಸೌಹಾರ್ದ ಸಾರುವ ಡಾ. ಅಂಬೇಡ್ಕರ್, ಮಹಾತ್ಮ ಗಾಂಧಿ, ಭಗತ್ ಸಿಂಗ್, ನಾರಾಯಣ ಗುರು, ಕೋಟಿ ಚೆನ್ನಯ್ಯ, ಕುದ್ಮಲ್ ರಂಗರಾವ್, ವಸಾಹತು ಆಕ್ರಮಣದ ವಿರುದ್ಧ ಸೈನ್ಯ ಕಟ್ಟಿ ಹೋರಾಡಿದ ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ, ಅಮರ ಸುಳ್ಯ, ವೀರರ ಭಾವಚಿತ್ರದ ಟ್ಯಾಬ್ಲೋ ಚೆಂಡೆ, ಬ್ಯಾಂಡ್ ಸೆಟ್, ವೇಷಭೂಷಣಗಳ ಜೊತೆ ಆಕರ್ಷಕ ಪಥ ಸಂಚಲನ ನಡೆಯಲಿದ್ದು ಮೂರು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಡಾ. ಕೃಷ್ಣಪ್ಪ ಕೊಂಚಾಡಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಬಜಾಲ್, ಸಂಘಟನಾ ಕಾರ್ಯದರ್ಶಿ ಸುನಿಲ್ ಕುಮಾರ್, ಕೋಶಾಧಿಕಾರಿ ಬಿ.ಕೆ ಇಮ್ತಿಯಾಝ್, ಸಮ್ಮೇಳನದ ಸ್ವಾಗತ ಸಮಿತಿ ಸದಸ್ಯರಾದ ನವೀನ್ ಕೊಂಚಾಡಿ, ಮನೋಜ್ ವಾಮಂಜೂರು, ರಿಜ್ವಾನ್ ಹರೇಕಳ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here