ಮಂಗಳೂರು(ಬೆಂಗಳೂರು): ”ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಅಲ್ಲ ಎಂಬ ಸುತ್ತೋಲೆಯಲ್ಲಿ ಪ್ರಿಂಟ್ ಮಿಸ್ಟೇಕ್” ಆಗಿತ್ತು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರಿ ಶಾಲೆಗಳಿಗೆ ನಾಡಗೀತೆ ಆದೇಶ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ”ಒಂದು ಸಣ್ಣ ಪ್ರಿಂಟ್ ಸಮಸ್ಯೆ ಆಗಿದೆ. ನೋಟ್ ಶೀಟ್ನಲ್ಲಿ ಎಲ್ಲಾ ಶಾಲೆಗಳು ಎಂದಿದೆ. ಅದು ಮುದ್ರಣ ತಪ್ಪಿನಿಂದ ಆಗಿದೆ. ಅದನ್ನು ಸರಿಪಡಿಸಿ, ಮರು ಆದೇಶ ಹೊರಡಿಸಲಾಗುವುದು. ನಮಗೆ ಎಲ್ಲಾ ಶಾಲೆಗಳು ಒಂದೇ. ಆದೇಶ ಮಾಡಬೇಕಾದರೆ ಸರ್ಕಾರಿ ಶಾಲೆ, ಅನುದಾನಿತ ಶಾಲೆ ಅಂತಾ ಹಾಕಿದ್ದಾರೆ” ಎಂದು ಸ್ಟಷ್ಟಪಡಿಸಿದ್ದಾರೆ. ”ತಿದ್ದುಪಡಿ ಆದೇಶದಲ್ಲಿ ಎಲ್ಲಾ ಶಾಲೆಗಳಲ್ಲಿ ಕಡ್ಡಾಯ ನಾಡಗೀತೆ ಅಂತಾ ಹಾಕಿಸುತ್ತೇವೆ. ನಮ್ಮ ಸರ್ಕಾರ ಕನ್ನಡದ ಬಗ್ಗೆ ಕಾಳಜಿ ಇಟ್ಟಿದೆ. ನಾವು ಬಹಳ ಸ್ಪಷ್ಟವಾಗಿದ್ದೇವೆ. ಆದೇಶ ಪ್ರತಿಯ ಸಾಧಕ – ಬಾಧಕ ಪರಿಶೀಲಿಸಬೇಕು. ಮಾಧ್ಯಮ ಮಿತ್ರರಿಗೆ ಇದರ ಬಗ್ಗೆ ತಿಳಿಸಬೇಕು ಅಂತಲೇ ಬಂದೆ. ಸಹಜವಾಗಿ ನೋಟ್ ಶೀಟ್ ಒಳಗಡೆ ಸಣ್ಣಪುಟ್ಟ ಸಮಸ್ಯೆ ಆಗಿದೆ. ಸಂಜೆಯೊಳಗೆ ತಿದ್ದುಪಡಿ ಮಾಡಿ ಮರು ಆದೇಶ ಹೊರಡಿಸುತ್ತೇವೆ” ಎಂದು ಹೇಳಿದ್ದಾರೆ.