ವೇಣೂರು ಬಾಹುಬಲಿಗೆ ಮಹಾಮಜ್ಜನ-ಫೆ.22 ರಿಂದ ಮಾ.1ರ ವರೆಗೆ ಈ ಶತಮಾನದ 3ನೇ ಮಹಾಮಸ್ತಕಾಭಿಷೇಕ

ಮಂಗಳೂರು(ಬೆಳ್ತಂಗಡಿ): ತ್ಯಾಗ ಸಂದೇಶದಿಂದ ಜಗದ್ವಿಖ್ಯಾತಿ ಹೊಂದಿ ಪಥದರ್ಶಕನಾದ ಭಗವಾನ್‌ ಬಾಹುಬಲಿ ಸ್ವಾಮಿಗೆ ವೇಣೂರಿನಲ್ಲಿ ಇಂದಿನಿಂದ ಈ ಶತಮಾನದ ಮೂರನೇ ಮಹಾಮಜ್ಜನ ಆರಂಭವಾಗಲಿದೆ. 12 ವರ್ಷಗಳ ಬಳಿಕ ನಡೆಯಲಿರುವ ಈ ಮಹೋತ್ಸವಕ್ಕೆ ಆಗಮಿಸಲಿರುವ ಜಿನಭಕ್ತರನ್ನು ಸ್ವಾಗತಿಸಲು ವೇಣೂರು ಸಜ್ಜಾಗಿದೆ.

ಕ್ರಿ.ಶ. 1604ರಲ್ಲಿ 35 ಅಡಿ ಎತ್ತರದ ಏಕಶಿಲಾ ಬಾಹುಬಲಿ ಮೂರ್ತಿಯನ್ನು ಅಜಿಲ ಅರಸರಾದ ತಿಮ್ಮಣ್ಣಾಜಿಲರು ಪ್ರತಿಷ್ಠಾಪಿಸಿ ಪ್ರಥಮ ಮಹಾ ಮಸ್ತಕಾಭಿಷೇಕ ನೆರವೇರಿಸಿದ್ದರು. ಈ ಹಿಂದೆ 1928, 1956 ರಲ್ಲಿ ಮಹಾ ಮಜ್ಜನ ನಡೆದ ಬಳಿಕ 2000, 2012ರಲ್ಲಿ ಮಹಾಮಜ್ಜನ ನಡೆದಿತ್ತು. ಈ ಶತಮಾನದ 3ನೇ ಮಹಾಮಸ್ತಕಾಭಿಷೇಕ ಇಂದಿನಿಂದ ನಡೆಯಲಿದ್ದು, 12 ವರುಷಗಳ ತರುವಾಯ ನಡೆಯುವ ಈ ಮಹಾಮಜ್ಜನಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸಿ ಸೇವೆಯನ್ನು ಸಮರ್ಪಿಸಲಿದ್ದಾರೆ. ನವೇಣೂರು ಗ್ರಾಮದ ಫಲ್ಗುಣೀ ನದಿ ತೀರದಲ್ಲಿ ಉತ್ತರಾಭಿಮುಖವಾಗಿ ನಿಂತಿರುವ 35 ಅಡಿ ಎತ್ತರದ ಏಕಶಿಲಾ ರಚನೆಯ ಬಾಹುಬಲಿ ಮೂರ್ತಿಯ ಮಜ್ಜನಕ್ಕೆ ವೇಣೂರು ಸಿದ್ಧಗೊಂಡಿದ್ದು, 420 ವರ್ಷಗಳ ಇತಿಹಾಸದಲ್ಲಿ 35 ಅಡಿ ಎತ್ತರದ ವಿಗ್ರಹಕ್ಕೆ 9 ದ್ರವ್ಯಗಳ ಮೂಲಕ ನಡೆಯುವ ವರ್ಣಮಯ 6ನೇ ಮಹಾಮಜ್ಜನ ಇಂದಿನಿಂದ 9 ದಿನಗಳ ಕಾಲ ನಡೆಯಲಿದೆ.

ಫೆ. 22ರಿಂದ ಮಾ 1ರ ತನಕ ನಡೆಯುವ ಮಹಾ ಮಸ್ತಕಾಭಿಷೇಕಕ್ಕೆ ಇಂದು ಅಪರಾಹ್ನ 3ಕ್ಕೆ ಚಾಲನೆ ದೊರಕಲಿದೆ. ಪೂಜ್ಯ 108 ಶ್ರೀ ಅಮೋಘಕೀರ್ತಿ ಮಹಾರಾಜರು ಹಾಗೂ ಪೂಜ್ಯ 108 ಶ್ರೀ ಅಮರಕೀರ್ತಿ ಮಹಾರಾಜರು, ಮೂಡುಬಿದಿರೆ ಜೈನಮಠದ ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ, ಶ್ರವಣಬೆಳಗೊಳ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಸಾನ್ನಿಧ್ಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ದಿನೇಶ್‌ ಗುಂಡೂರಾವ್‌ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಸಂಸದ ನಳಿನ್‌ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ.

LEAVE A REPLY

Please enter your comment!
Please enter your name here