ಮಂಗಳೂರು(ಉಡುಪಿ): ಉಡುಪಿಯಲ್ಲಿ ವರ್ಷದ ಮೊದಲ ಮಂಗನ ಕಾಯಿಲೆ ಪ್ರಕರಣ ದಾಖಲಾಗಿದೆ. ಶುಕ್ರವಾರ ಶಿವಮೊಗ್ಗದಲ್ಲಿ 1, ಚಿಕ್ಕಮಗಳೂರು 4, ಉಡುಪಿಯಲ್ಲಿ 1 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಉಡುಪಿಯಲ್ಲಿ ಈ ವರ್ಷದ ಮೊದಲ ಪ್ರಕರಣ ಇದಾಗಿದೆ.
ಈವರೆಗೆ 117 ಮಂದಿಗೆ ಮಂಗನ ಕಾಯಿಲೆ ಪಾಸಿಟಿವ್ ಬಂದಿದ್ದು, 82 ಮಂದಿ ಗುಣಮುಖರಾಗಿದ್ದರೆ ಮೂವರು ಮೃತಪಟ್ಟಿದ್ದಾರೆ. 19 ಸಕ್ರಿಯ ಪ್ರಕರಣಗಳಿವೆ. ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 58 ವರ್ಷದ ಮಹಿಳೆಗೆ ಮಂಗನ ಕಾಯಿಲೆ ದೃಢಪಟ್ಟಿದೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಹೇಗೆ ತಗಲಿತು ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಕುಂದಾಪುರ ಭಾಗದಲ್ಲಿ ಹೆಚ್ಚಿನ ಪರಿಶೀಲನೆ ಮಾಡಲಾಗುತ್ತಿದೆ. 2019ರಲ್ಲಿ ಜಿಲ್ಲೆಯಲ್ಲಿ ಒಂದು ಪ್ರಕರಣ ಕಂಡುಬಂದಿತ್ತು. ಆ ಬಳಿಕ ಯಾವುದೇ ಪ್ರಕರಣಗಳು ಕಂಡುಬಂದಿರಲಿಲ್ಲ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಪಿ.ಐ. ಗಡಾದ್ ಮಾಹಿತಿ ನೀಡಿದ್ದಾರೆ.