ಮಂಗಳೂರು(ಉತ್ತರ ಪ್ರದೇಶ): ಗ್ರಾಮಸ್ಥರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಯೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ 15 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಸ್ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಮೃತಪಟ್ಟವರ ಪೈಕಿ ಬಹುತೇಕರು ಮಹಿಳೆಯರು ಮತ್ತು ಮಕ್ಕಳು ಎಂದು ವರದಿಯಾಗಿದೆ.
ಮಾಘ ಪೂರ್ಣಿಮೆಯಂದು ಗಂಗಾ ನದಿಯಲ್ಲಿ ಸ್ನಾನ ಮಾಡಲು ಬಹುತೇಕ ಮಹಿಳೆಯರು ಹಾಗೂ ಮಕ್ಕಳನ್ನು ಒಳಗೊಂಡಿದ್ದ ಗ್ರಾಮಸ್ಥರು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಎದುರಿಗೆ ಬಂದ ಕಾರನ್ನು ತಪ್ಪಿಸಲು ಯತ್ನಿಸಿದ ಟ್ರ್ಯಾಕ್ಟರ್ ಚಾಲಕನು ನಿಯಂತ್ರಣ ಕಳೆದುಕೊಂಡಿದ್ದರಿಂದ ಟ್ರ್ಯಾಕ್ಟರ್ ಟ್ರಾಲಿಯು ಮಗುಚಿಕೊಂಡು ಕೆರೆಗೆ ಬಿದ್ದು ಈ ದುರಂತ ಸಂಭವಿಸಿದೆ. ಮೃತರ ಸಂಖ್ಯೆಯನ್ನು ದೃಢಪಡಿಸಿರುವ ಆಲಿಗಢ ವಲಯದ ಪೊಲೀಸ್ ಮಹಾ ನಿರೀಕ್ಷಕ ಶಲಭ್ ಮಾತೂರ್, ಅಪಘಾತದಲ್ಲಿ 15 ಮಂದಿ ಮೃತಪಟ್ಟಿದ್ದು, ಈ ಪೈಕಿ ಎಂಟು ಮಂದಿ ಮಕ್ಕಳು ಹಾಗೂ ಏಳು ಮಂದಿ ಮಹಿಳೆಯರು ಸೇರಿದ್ದಾರೆ ಎಂದು ತಿಳಿಸಿದ್ದಾರೆ. ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವವರಿಗೆ ಸೂಕ್ತ ಚಿಕಿತ್ಸೆಯನ್ನು ಖಾತರಿಗೊಳಿಸುವಂತೆ ಕಸ್ಗಂಜ್ ಜಿಲ್ಲಾಡಳಿತಕ್ಕೆ ಅವರು ಸೂಚನೆ ನೀಡಿದ್ದಾರೆ.