ಮಂಗಳೂರು(ಪುತ್ತೂರು): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಸೂಚನೆಯಂತೆ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪ ಮತದ ಅಂತರದಿಂದ ಸೋಲು ಕಂಡ ಪ್ರಭಾವಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಇಂದು ಮಧ್ಯಾಹ್ನ (ಫೆ.29) ಮಹತ್ವದ ಪತ್ರಿಕಾಗೋಷ್ಠಿ ಕರೆದಿದ್ದಾರೆ.
ಪುತ್ತಿಲ ಪರಿವಾರದ ಮುಕ್ರಂಪಾಡಿಯ ಕಚೇರಿಯಲ್ಲಿ ಕರೆದಿರುವ ಈ ಪತ್ರಿಕಾಗೋಷ್ಠಿಯಲ್ಲಿ ಅರುಣ್ ಪುತ್ತಿಲ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಸ್ಪಷ್ಟತೆ ನೀಡಲಿದ್ದಾರೆ ಎನ್ನಲಾಗಿದೆ. ಬಿಜೆಪಿ ನಾಯಕರ ಜೊತೆ ಹಲವು ಸುತ್ತಿನ ಮಾತುಕತೆಯ ಬಳಿಕವೂ ಪಕ್ಷ ಸೇರ್ಪಡೆ ಕುರಿತು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಬೇಷರತ್ತಾಗಿ ಪಕ್ಷ ಸೇರ್ಪಡೆಯಾಗಬೇಕು ಎನ್ನುವ ನಾಯಕರ ಸೂಚನೆಗೆ ಪುತ್ತಿಲ ಪ್ರತಿಕ್ರಿಯೆ ನೀಡಬಹುದೆನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಬೇಷರತ್ತಾಗಿ ಪಕ್ಷ ಸೇರ್ಪಡೆಯಾಗುತ್ತಾರೋ? ಇಲ್ಲ ಕಾರ್ಯಕರ್ತರ ಒತ್ತಾಸೆಯಂತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೋ? ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ ಸೂಚಿಸಿ ಲೋಕಸಭಾ ಚುನಾವಣೆ ಸ್ಪರ್ಧೆಯಿಂದ ದೂರ ಉಳಿಯುತ್ತಾರೋ? ಉತ್ತರಕ್ಕಾಗಿ ಪತ್ರಿಕಾಗೋಷ್ಠಿವರೆಗೂ ಕಾಯಬೇಕಾಗಿದೆ.