ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ 2009ರಿಂದ 2023ರವರೆಗಿನ ಮೂರು ಅವಧಿಗಳಲ್ಲಿ ಒಂದು ಲಕ್ಷ ಕೋಟಿ ರೂ. ಅನುದಾನ ತಂದು ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಈ ಸಾಧನೆಯನ್ನು ಅಂಕಿ ಅಂಶಗಳ ಸಹಿತ ಜನರ ಮುಂದೆ ಇರಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಫೆ.29ರಂದು ಕಟೀಲು ಅವಧಿಯಲ್ಲಿ ಬಿಡುಗಡೆಯಾದ ಅನುದಾನಗಳ ವಿವರ, ಕ್ಷೇತ್ರಾಭಿವೃದ್ಧಿ ಹಾಗೂ ರಾಜ್ಯಾಧ್ಯಕ್ಷರಾಗಿ ಮಾಡಿದ ಸಾಧನೆಗಳ ಪಕ್ಷಿನೋಟವುಳ್ಳ ಕಿರುಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಸಾಮಾನ್ಯ ಕಾರ್ಯಕರ್ತರಾಗಿದ್ದವರನ್ನು ಸಂಸದರನ್ನಾಗಿ ಮಾಡಿದ ಕ್ಷೇತ್ರದ ಜನರಿಗೆ ತಾನು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸುವುದು ಸಂಸದರಾಗಿ ನಳಿನ್ ಕುಮಾರ್ ಅವರ ಜವಾಬ್ದಾರಿಯಾಗಿತ್ತು. ಅದನ್ನು ಈ ಪುಸ್ತಕದ ಮೂಲಕ ಪ್ರಾಮಾಣಿಕವಾಗಿ ಮಾಡಿದ್ದಾರೆ ಎಂದು ಅವರು ಹೇಳಿದರು.
ಯುಪಿಎ ಅವಧಿಯಲ್ಲಿ 4.5 ಸಾವಿರ ಅನುದಾನ:
ಯುಪಿಎ ಅವಧಿಯಲ್ಲಿ ಜಿಲ್ಲೆಗೆ ಕೇವಲ 4.5 ಸಾವಿರ ಕೋಟಿ ರೂ. ಬಂದಿದ್ದರೆ ಆ ಮೊತ್ತವನ್ನು ಒಂದು ಲಕ್ಷ ಕೋಟಿ ರೂ.ಗೆ ಏರಿಸಿ ಸಮಾಜಮುಖಿ ಕೆಲಸಗಳನ್ನು ನಳಿನ್ ಕುಮಾರ್ ಮಾಡಿದ್ದಾರೆ. ಅವರ ಅಧಿಕಾರವಧಿಯಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾರ್ಯ ಕೆಲವು ಪೂರ್ಣಗೊಂಡಿದ್ದು, ಕೆಲವು ಪ್ರಗತಿಯಲ್ಲಿವೆ. ಸಾವಿರಾರು ರೂ. ಅನುದಾನ ತಂದು ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಿದ್ದಾರೆ. ಬಂದರು ಇಲಾಖೆ ಅಭೂತಪೂರ್ವವಾಗಿ ಅಭಿವೃದ್ಧಿಯಾಗಿದೆ. ವಂದೇ ಭಾರತ್ ರೈಲನ್ನು ಜಿಲ್ಲೆಗೆ ತಂದು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಸತೀಶ್ ಕುಂಪಲ ಸ್ಮರಿಸಿದರು. ಜಿಲ್ಲೆಯಲ್ಲಿ ರಸ್ತೆ, ನೀರು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ, ಮಂಗಳೂರು ಮಹಾನಗರಕ್ಕೆ ಸ್ಮಾರ್ಟ್ ಸಿಟಿ ಹಾಗೂ ವಿವಿಧ ಯೋಜನೆಗಳನ್ನು ತರುವ ಮೂಲಕ ಹೊಸ ಸ್ಪರ್ಶ ನೀಡಿದ್ದಾರೆ. ತೀರಾ ಕುಗ್ರಾಮವಾಗಿದ್ದ ಬಳ್ಪ ಗ್ರಾಮವನ್ನು ಅಭಿವೃದ್ಧಿಪಡಿಸಿ ಇಡೀ ದೇಶದಲ್ಲೇ ಮಾದರಿ ಆದರ್ಶ ಗ್ರಾಮವನ್ನಾಗಿ ಮಾಡಿದ್ದಾರೆ. ಪ್ಲಾಸ್ಟಿಕ್ ಪಾರ್ಕ್ ಸೇರಿದಂತೆ ಹತ್ತು ಹಲವು ಯೋಜನೆಗಳು ಜಿಲ್ಲೆಗೆ ಬಂದಿದ್ದರೆ ಅದಕ್ಕೆ ಸಂಸದ ನಳಿನ್ ಕುಮಾರ್ ಕಾರಣ ಎಂದು ಹೇಳಿದರು.
25 ಬಾರಿ ರಾಜ್ಯ ಪ್ರವಾಸ:
ರಾಜ್ಯಾಧ್ಯಕ್ಷರಾಗಿ ಪ್ರಥಮ ಬಾರಿಗೆ 25ಕ್ಕಿಂತ ಹೆಚ್ಚು ಬಾರಿ ರಾಜ್ಯ ಪ್ರವಾಸ ಕೈಗೊಂಡು ಪಕ್ಷ ಬಲವರ್ಧನೆ ಮಾಡಿರುವ ನಳಿನ್ ಕುಮಾರ್, 21 ಸ್ತರದ ಚುನಾವಣೆಗಳಲ್ಲಿ ಹಿಂದಿನ ಚುನಾವಣೆಗಳಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ. ಅಲ್ಲದೆ, 35 ಜಿಲ್ಲೆಗಳಲ್ಲಿ (ಪಕ್ಷದ ವ್ಯಾಪ್ತಿ) ಸ್ವಂತ ಜಾಗ ಖರೀದಿಸಿ ಕಾರ್ಯಾಲಯ ನಿರ್ಮಾಣ ಕೆಲಸ ಮಾಡಿದ್ದಾರೆ. ರಾಜ್ಯಾಧ್ಯಕ್ಷರಾಗಿ, ಸಂಸದರಾಗಿ ತಮ್ಮ ಕೆಲಸಗಳ ಮೂಲಕ ನಳಿನ್ ಕುಮಾರ್ ಮಾಡಿದ ಕೆಲಸಗಳು ಇದೀಗ ಜನರ ಮುಂದಿವೆ ಎಂದು ಕುಂಪಲ ತಿಳಿಸಿದ್ದಾರೆ.
ವರಿಷ್ಠರ ತೀರ್ಮಾನಕ್ಕೆ ಬದ್ಧ: ನಳಿನ್ ಕುಮಾರ್
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕಟೀಲ್ ಮುಂಬರುವ ಲೋಕಸಭೆ ಚುನಾವಣೆ ಸ್ಪರ್ಧೆಗೆ ಟಿಕೆಟ್ ನೀಡುವುದು ರಾಷ್ಟ್ರೀಯ ನಾಯಕರ ತೀರ್ಮಾನ. ವರಿಷ್ಠರು ಏನೇ ತೀರ್ಮಾನ ಮಾಡಿದರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಅದಕ್ಕೆ ಬದ್ಧ ಎಂದು ಹೇಳಿದ್ದಾರೆ. ರಾಮಮಂದಿರ ನಿರ್ಮಾಣದ ಬಳಿಕ ಬಿಜೆಪಿ ಪರ ವಾತಾವರಣ ಅದ್ಭುತವಾಗಿದೆ. ವಿಧಾನಸಭಾ ಚುನಾವಣೆಗೂ ಲೋಕಸಭಾ ಚುನಾವಣೆಗೂ ವ್ಯತ್ಯಾಸ ಇದೆ. ಹಿಂದುತ್ವ, ರಾಷ್ಟ್ರವಾದ, ಅಭಿವೃದ್ಧಿ ವಿಚಾರವಾಗಿ ಜನರು ಒಗ್ಗಟಾಗುತ್ತಾರೆ ಎಂದು ನಳಿನ್ ಕುಮಾರ್ ಹೇಳಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್, ಕಿಶೋರ್ ಪುತ್ತೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.