ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಸೇರಿ 40 ಅಭ್ಯರ್ಥಿಗಳ ಹೆಸರು ಅಂತಿಮ

ಮಂಗಳೂರು(ನವದೆಹಲಿ): ಮುಂಬರುವ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಸೇರಿದಂತೆ 40 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಮಾ.7ರಂದು ಅಂತಿಮಗೊಳಿಸಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 60 ಲೋಕಸಭಾ ಸ್ಥಾನಗಳ ಕುರಿತು ಚರ್ಚಿಸಲಾಯಿತು ಎಂದು ಮೂಲಗಳು ಮಾಹಿತಿ ನೀಡಿವೆ. ದೆಹಲಿ, ಕರ್ನಾಟಕ, ಕೇರಳ, ಛತ್ತೀಸ್‌ಗಢ, ತೆಲಂಗಾಣ, ಸಿಕ್ಕಿಂ, ತ್ರಿಪುರ, ನಾಗಾಲ್ಯಾಂಡ್, ಮಣಿಪುರ, ಮೇಘಾಲಯ ಮತ್ತು ಲಕ್ಷದ್ವೀಪದ ಲೋಕಸಭೆ ಸ್ಥಾನಗಳ ಕುರಿತು ಚರ್ಚೆ ನಡೆದಿದೆ.

ಕೇರಳದಲ್ಲಿ ಕಾಂಗ್ರೆಸ್​ 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಉಳಿದ ನಾಲ್ಕು ಸ್ಥಾನಗಳಲ್ಲಿ ಮಿತ್ರಪಕ್ಷಗಳು ಕಣಕ್ಕಿಳಿಯಲಿವೆ. 16 ಸ್ಥಾನಗಳಲ್ಲಿ ಅಭ್ಯರ್ಥಿಗಳು ಯಾರು ಎಂಬ ಬಗ್ಗೆ ಸಿಇಸಿ ನಿರ್ಧಾರ ಕೈಗೊಂಡಿದೆ. ಮಾ.8ರಂದು ಎಐಸಿಸಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಿದೆ ಎಂದು ಕೇರಳ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ವಿ.ಡಿ.ಸತೀಶನ್ ಹೇಳಿದ್ದಾರೆ. ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಕೇರಳದ ವಯನಾಡ್ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲು ಬಯಸಲಿದ್ದಾರೆ. ಎಐಸಿಸಿ ಉಸ್ತುವಾರಿ ದೆಹಲಿ ದೀಪಕ್ ಬಬಾರಿಯಾ ಅವರು, ”ದೆಹಲಿ ಅಭ್ಯರ್ಥಿಗಳ ಬಗ್ಗೆ ಪ್ರಾಥಮಿಕ ಚರ್ಚೆಯಾಗಿದೆ. ಅಲ್ಲಿ ಪಕ್ಷವು ಮೂರು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇಂಡಿಯಾ ಬ್ಲಾಕ್ ಮಿತ್ರ ಪಕ್ಷ ಎಎಪಿ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಮಾರ್ಚ್ 11ರಂದು ದೆಹಲಿ ಸ್ಥಾನಗಳ ಕುರಿತು ಮತ್ತೆ ಚರ್ಚೆ ನಡೆಯಲಿದೆ” ಎಂದು ತಿಳಿಸಿದರು.

ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ರಾಜನಂದಗಾಂವ್‌ನಿಂದ ಕಣಕ್ಕಿಳಿಯಲಿದ್ದಾರೆ. ಮಾಜಿ ಸಚಿವ ತಾಮ್ರಧ್ವಜ್ ಸಾಹು ಅವರು ರಾಜ್ಯದ ಮಹಾಸಮುಂಡ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಕೂಡ ಅಂತಿಮಗೊಂಡ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಛತ್ತೀಸ್‌ಗಢದ ಮಾಜಿ ಉಪಮುಖ್ಯಮಂತ್ರಿ ಟಿ.ಎಸ್.ಸಿಂಘ್‌ದೇವ್ ಅವರು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿದುಬಂದಿದೆ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ವೇಣುಗೋಪಾಲ್ ಹಾಗೂ ಸಿಇಸಿಯ ಭಾಗವಾಗಿರುವ ಇತರ ಹಿರಿಯ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾಂಗ್ರೆಸ್ ಇದುವರೆಗೆ ಯಾವುದೇ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿಲ್ಲ. ಕಳೆದ ವಾರ ಬಿಜೆಪಿ ಲೋಕಸಭೆ ಚುನಾವಣೆಗೆ 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಅಭ್ಯರ್ಥಿಗಳು ಪ್ರಚಾರ ಆರಂಭಿಸಲು ಅನುಕೂಲವಾಗುವಂತೆ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಅವರು ಅಮೇಥಿಯಿಂದ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ರಾಯ್ ಬರೇಲಿಯಿಂದ ಸ್ಪರ್ಧಿಸಬಹುದು. ಈ ಎರಡೂ ಕ್ಷೇತ್ರಗಳು ಗಾಂಧಿ ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದು, ಕಾಂಗ್ರೆಸ್ ಮೊದಲ ಕುಟುಂಬದ ಇಬ್ಬರು ವಂಶಸ್ಥರು ಅಲ್ಲಿಂದ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್‌ನ ಸ್ಥಳೀಯ ಘಟಕಗಳು ಒತ್ತಾಯಿಸಿವೆ. ಈ ಹಿಂದೆ ಅಮೇಥಿಯಿಂದ ಸಂಸದರಾಗಿದ್ದ ರಾಹುಲ್ ಗಾಂಧಿ 2019ರಲ್ಲಿ ಕ್ಷೇತ್ರವನ್ನು ಕಳೆದುಕೊಂಡರು. ಆದರೆ, ಕೇರಳದ ವಯನಾಡಿನಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಹಲವಾರು ರಾಜ್ಯ ಘಟಕಗಳು ಈಗಾಗಲೇ ಆಯಾ ಸ್ಕ್ರೀನಿಂಗ್ ಸಮಿತಿಗಳ ಸಭೆಗಳನ್ನು ನಡೆಸಿವೆ. ಆಯಾ ರಾಜ್ಯಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ರವಾನಿಸಲಾಗಿದೆ. ಅಂಬಿಕಾ ಸೋನಿ, ಅಧೀರ್ ರಂಜನ್ ಚೌಧರಿ, ಟಿ.ಎಸ್. ಸಿಂಗ್‌ದೇವ್ ಮತ್ತು ಮೊಹಮ್ಮದ್ ಜವೈದ್ ಸಿಇಸಿಯ ಇತರ ಸದಸ್ಯರಾಗಿದ್ದಾರೆ.

LEAVE A REPLY

Please enter your comment!
Please enter your name here