ಮಂಗಳೂರು(ಬೆಂಗಳೂರು): ಕರಾವಳಿ ಸೇರಿದಂತೆ ರಾಜ್ಯದಲ್ಲಿ ಅಡಿಕೆ ಬೆಳೆಗಾರರಿಗೆ ಶಾಕ್ ನೀಡುವ ಸುದ್ದಿಯೊಂದು ಹೊರಬಿದ್ದಿದೆ. ಶ್ರೀಲಂಕಾದಿಂದ ಭರ್ಜರಿ 5 ಲಕ್ಷ ಟನ್ ಅಡಕೆಯನ್ನು ಆಮದು ಮಾಡಿಕೊಳ್ಳಲು ಕಂಪನಿಯೊಂದು ಮುಂದಾಗಿದ್ದು, ಅಡಕೆ ಬೆಳೆಗಾರರಿಗೆ ದರ ಕುಸಿತದ ಆತಂಕ ಎದುರಾಗಿದೆ.
ಶ್ರೀಲಂಕಾದಿಂದ ಅಡಿಕೆ ಆಮದು ಸಂಬಂಧ ಬ್ರಿಟನ್ ಮೂಲದ ಎಸ್‌ರಾಂ ಅಂಡ್ ಎಂರಾಂ ಗ್ರೂಪ್ ಒಪ್ಪಂದ ಮಾಡಿಕೊಂಡಿದೆ. ಶ್ರೀಲಂಕಾ ಮೂಲದ ವ್ಯಾಪಾರಿ ಸಂಸ್ಥೆ ಪ್ರೈಮ್ ಸ್ಟಾರ್ ಪ್ರೈವೇಟ್ ಲಿಮಿಟೆಡ್ ಜತೆ ಅಡಕೆ ಆಮದು ಒಪ್ಪಂದ ಮಾಡಿಕೊಂಡಿರುವುದಾಗಿ ಎಸ್‌ರಾಂ ಅಂಡ್ ಎಂರಾಂ ಗ್ರೂಪ್ ತಿಳಿಸಿದೆ. 2022ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಭಾರತ 53.71 ಕೋಟಿ ರೂ. ಮೌಲ್ಯದ ಅಡಿಕೆ ಆಮದು ಮಾಡಿಕೊಂಡಿತ್ತು. ಆದರೆ 2023ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಇದು 4.04 ಕೋಟಿ ರೂ.ಗೆ ಕುಸಿದಿತ್ತು. ಇಂಡೋನೇಷ್ಯಾ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಿಂದ ಭಾರತ ಅಡಿಕೆ ಆಮದು ಮಾಡಿಕೊಳ್ಳುತ್ತಿದೆ. ಇದೀಗ ಲಂಕಾದಿಂದ ಭಾರಿ ಪ್ರಮಾಣದಲ್ಲಿ ಆಮದಿಗೆ ಬ್ರಿಟನ್ ಕಂಪನಿ ಮುಂದಾಗಿರುವುದರಿಂದ ಸಹಜವಾಗಿಯೇ ಅಡಕೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಕೇಜಿಗೆ 351 ರು.ಗಿಂತ ಕಡಿಮೆ ಇಲ್ಲದ ಅಡಕೆ ಆಮದಿಗೆ ಮಾತ್ರವೇ ಅವಕಾಶವಿದೆ ಎಂದುದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ತಿಳಿಸಿದೆ.