ಮಂಗಳೂರು(ವಿಟ್ಲ): ವಿಟ್ಲ ಪಡ್ನೂರು ಗ್ರಾಮದ ವಿಧವೆ ಮಹಿಳೆ ನಾಪತ್ತೆಯಾದ ಬಗ್ಗೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೇ ಸಂದರ್ಭ ನಾಲ್ಕು ಮಕ್ಕಳ ತಂದೆಯಾಗಿರುವ ಮುಸ್ಲಿಂ ವ್ಯಕ್ತಿಯೊಬ್ಬ ಮಹಿಳೆಯನ್ನು ಅಪಹರಿಸಿ ಮತಾಂತರ ಮಾಡುವ ಶಂಕೆ ವ್ಯಕ್ತಪಡಿಸಿರುವ ಹಿಂದೂ ಸಂಘಟನೆಗಳು ಠಾಣೆಗೆ ದೂರು ನೀಡಿದೆ.
ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿ ನಿವಾಸಿ ವೇದಾವತಿ ನಾಪತ್ತೆಯಾದ ಮಹಿಳೆ. ಇದೇ ಪರಿಸರದ ಫ್ಲ್ಯಾಟಲ್ಲಿದ್ದ ಮೂಲತಃ ಸಜಿಪ ನಿವಾಸಿ ಗುಜುರಿ ಕಾರ್ಮಿಕನಾಗಿದ್ದು ಸ್ಥಳೀಯ ವಾಟರ್ ಮ್ಯಾನ್ ಆಗಿರುವ ಶರೀಫ್ ಯಾನೆ ಅಬ್ದುಲ್ ರಹಿಮಾನ್ ಕೂಡಾ ನಾಪತ್ತೆಯಾಗಿದ್ದಾನೆ. ಐದು ದಿನಗಳ ಹಿಂದೆ ವೇದಾವತಿ ನಾಪತ್ತೆಯಾದ ಬೆನ್ನಿಗೇ ಶರೀಫ್ ಕೂಡಾ ನಾಪತ್ತೆಯಾಗಿದ್ದ. ಶರೀಫ್ ನಾಲ್ಕು ಮಕ್ಕಳ ತಂದೆಯಾಗಿದ್ದಾನೆ. ಶರೀಫ್ ಪುತ್ರ ವೇದಾವತಿಯ ಮಗನಿಗೆ ನೀಲಿ ವೀಡಿಯೋ ತೋರಿಸಿ ‘ಇದು ನಿನ್ನ ತಾಯಿಯ ವೀಡಿಯೋ ಇದನ್ನು ಸಾಮಾಜಿಕ ತಾಣದಲ್ಲಿ ಹಾಕುತ್ತೇನೆ” ಎಂದು ಬೆದರಿಸಿದ್ದಾನೆ ಎನ್ನಲಾಗಿದೆ. ಇದೇ ವಿಚಾರದಲ್ಲಿ ವೇದಾವತಿಯನ್ನು ಬ್ಲ್ಯಾಕ್ಮೇಲ್ ಮಾಡಿದ ಶರೀಫ್ ಆಕೆಯನ್ನು ವಶೀಕರಣ ಮೂಲಕ ಕರೆದೊಯ್ದಿದ್ದಾನೆ ಎಂದು ಹಿಂದೂ ಸಂಘಟನೆಗಳು ವಿಟ್ಲ ಠಾಣೆಗೆ ದೂರು ನೀಡಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಶೀಘ್ರದಲ್ಲಿ ಇವರನ್ನು ಪತ್ತೆಹಚ್ಚಿ ಆರೋಪಿ ಅಬ್ದುಲ್ ರಹಿಮಾನ್ ಅಲಿಯಾಸ್ ಶೆರೀಫ್ ಎಂಬಾತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪರಿವಾರ ಸಂಘಟನೆಗಳ ಪ್ರಮುಖರು ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ವಿ.ಹಿಂ.ಪ. ಬಜರಂಗದಳ ಜಿಲ್ಲಾ ಮಠ ಮಂದಿರ ಪ್ರಮುಖ್ ಪದ್ಮನಾಭ ಕಟ್ಟೆ , ವಿ.ಹಿಂ.ಪ. ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕ ಚೇತನ್ ಕಡಂಬು, ವಿ.ಹಿಂ.ಪ. ಬಜರಂಗದಳ ವಿಟ್ಲ ಪ್ರಖಂಡ ಅಧ್ಯಕ್ಷ ವಿಶ್ವನಾಥ್ ನಾಯ್ತೋಟ್ಟು, ವಿ.ಹಿಂ.ಪ. ಬಜರಂಗದಳ ವಿಟ್ಲ ಪ್ರಖಂಡ ಗೋರಕ್ಷ ಪ್ರಮುಖ್ ಹೇಮಂತ್ ಕುಂಡಡ್ಕ, ಹಿಂದೂ ಮುಖಂಡ ಚರಣ್ ಕಾಪುಮಜಲು, ಫ್ರೆಂಡ್ಸ್ ಕಾಪುಮಜಲು ಅಧ್ಯಕ್ಷ ವಿನಯ್ ಜೋಗಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.