ಮಂಗಳೂರು(ಹೈದರಾಬಾದ್): ಹೈದರಾಬಾದ್ ಮೂಲದ ಮಹಿಳೆಯೊಬ್ಬರ ಶವ ಆಸ್ಟ್ರೇಲಿಯಾದ ಕಸದ ತೊಟ್ಟಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಮೃತ ಮಹಿಳೆಯನ್ನು ಹೈದರಾಬಾದ್ ಮೂಲದ ಚೈತನ್ಯ ಮದಗಣಿ (36) ಎನ್ನಲಾಗಿದ್ದು ಈಕೆಯ ಶವ ಶನಿವಾರ ಆಸ್ಟ್ರೇಲಿಯಾದ ಬಕ್ಲಿಯ ರಸ್ತೆಯ ಬದಿಯಲ್ಲಿ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ.ಚೈತನ್ಯ ಹಲವು ವರ್ಷಗಳಿಂದ ತನ್ನ ಪತಿ ಅಶೋಕ್ ಅವರೊಂದಿಗೆ ಆಸ್ಟ್ರೇಲಿಯಾದ ಪಾಯಿಂಟ್ ಕುಕ್ಕ್ ಎಂಬಲ್ಲಿ ವಾಸವಾಗಿದ್ದರು ಇವರಿಗೆ ಒಂದು ಗಂಡು ಮಗು ಇದೆ.
ಕಳೆದ ಶನಿವಾರ ಆಸ್ಟ್ರೇಲಿಯಾದ ಪೊಲೀಸರು ಮಹಿಳೆಯ ಶವವನ್ನು ಪತ್ತೆಹಚ್ಚಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆದರೆ ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ಪತಿಯೇ ಮಹಿಳೆಯ ಹತ್ಯೆಗೈದು ಬಳಿಕ ಕಸದ ತೊಟ್ಟಿಗೆ ಎಸೆದು ಭಾರತಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ. ಚೈತನ್ಯ ಸಾವಿನ ಸುದ್ದಿ ಗೊತ್ತಾಗುತ್ತಿದ್ದಂತೆ ಚೈತನ್ಯ ಪೋಷಕರು ಅಳಿಯನ ವಿರುದ್ಧವೇ ಅನುಮಾನ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ, ಅಲ್ಲದೆ ಪತ್ನಿ ಸಾವಿನ ಬಳಿಕ ಪತಿ ಭಾರತಕ್ಕೆ ಓಡಿ ಬಂದಿರುವ ವಿಚಾರದಲ್ಲಿ ಪತಿಯೇ ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಎಂದು ಆರೋಪ ಮಾಡಲಾಗಿದೆ.
ಘಟನೆ ಸಂಬಂಧ ಉಪ್ಪಳ ಶಾಸಕ ಬಂಡಾರಿ ಲಕ್ಷ್ಮ ರೆಡ್ಡಿ ಮಾತನಾಡಿ, ಮಹಿಳೆ ತನ್ನ ಕ್ಷೇತ್ರದವಳಾದ ಕಾರಣ, ವಿಷಯ ತಿಳಿದ ನಂತರ ಇಂದು ಆಕೆಯ ಪೋಷಕರನ್ನು ಭೇಟಿ ಮಾಡಿದ್ದೇನೆ ಮಹಿಳೆಯ ಪೋಷಕರ ಕೋರಿಕೆಯ ಮೇರೆಗೆ ಮಹಿಳೆಯ ಮೃತದೇಹವನ್ನು ಹೈದರಾಬಾದ್‌ಗೆ ತರಲು ವಿದೇಶಾಂಗ ಕಚೇರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರ ಕಚೇರಿಗೂ ತಿಳಿಸಿರುವುದಾಗಿ ಶಾಸಕರು ಹೇಳಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಯಾರನ್ನೂ ಬಂಧಿಸಿಲ್ಲ, ತನಿಖೆ ನಡೆಯುತ್ತಿದೆ.