ಸುಪ್ರೀಂ ಕೋರ್ಟ್‌ ಆದೇಶ ಬೆನ್ನಲ್ಲೇ ಕುಸಿದ ಎಸ್‌ಬಿಐ ಶೇರು ದರ

ಮಂಗಳೂರು(ಹೊಸದಿಲ್ಲಿ): ಚುನಾವಣಾ ಬಾಂಡ್‌ ಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಕಾಲಾವಕಾಶ ಕೋರಿದ್ದ ಎಸ್‌ಬಿಐ ಗೆ ಸುಪ್ರೀಂಕೋರ್ಟ್‌ ತರಾಟೆ ತೆಗೆದುಕೊಂಡು, ನಾಳೆಯೊಳಗೆ ಮಾಹಿತಿ ನೀಡುವಂತೆ ಹೇಳಿದ ಬೆನ್ನಲ್ಲೇ, ಶೇರು ಮಾರುಕಟ್ಟೆಯಲ್ಲಿ ಎಸ್‌ಬಿಐ ಶೇರು ಮೌಲ್ಯ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.

ಚುನಾವಣಾ ಬಾಂಡ್‌ ಗಳಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ನೀಡಲು ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶವನ್ನು ಪಾಲಿಸಲು ತನಗೆ ಕಾಲಾವಕಾಶ ನೀಡಬೇಕು ಎಂದು ಎಸ್‌ಬಿಐ ವಿನಂತಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠ, ಎಸ್‌ಬಿಐ ನಿಲುವಿನ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಲ್ಲದೆ, ನಾಳೆ ಸಂಜೆ ಕಚೇರಿ ಸಮಯ ಮುಗಿಯುವುದರೊಳಗೆ ಮಾಹಿತಿ ನೀಡುವಂತೆ ಆದೇಶಿಸಿ ಎಸ್‌ಬಿಐ ಅರ್ಜಿ ವಜಾಗೊಳಿಸಿತ್ತು.

ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಎಸ್‌ಬಿಐ ನ ಶೇರು ದರ ಗಣನೀಯವಾಗಿ ಕುಸಿತ ಕಂಡಿದೆ. ದೇಶದ ಉನ್ನತ ನ್ಯಾಯಾಲಯದ ತೀರ್ಪಿನ ನಂತರ ಎಸ್‌ಬಿಐ ಶೇ.2 ರಷ್ಟು ಕುಸಿತ ಅನುಭವಿಸಿದೆ. ಮಧ್ಯಾಹ್ನ 3-30ರ ಸುಮಾರಿಗೆ ಎಸ್‌ಬಿಐ ಶೇರು ದರ ರೂ.773 ಆಗಿದ್ದು, ಹದಿನೈದು ರೂಪಾಯಿಯಷ್ಟು ಇಳಿಕೆ ಕಂಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ನೇತೃತ್ವದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ, ಬಿ.ಆರ್.ಗವಾಯ್‌, ಜೆ.ಬಿ.ಪರ್ದಿವಾಲಾ, ಮನೋಜ್‌ ಮಿಶ್ರಾ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಸಂವಿಧಾನಪೀಠ ಇಂದು ಎಸ್‌ಬಿಐ ಅರ್ಜಿಯನ್ನು ವಜಾಗೊಳಿಸಿ, ಮಾ.12ರೊಳಗೆ ಮಾಹಿತಿ ಸಲ್ಲಿಸಲು ಆದೇಶಿಸಿತ್ತು.

ಜೂ.30ರವರೆಗೆ ಕಾಲಾವಕಾಶ ಕೋರಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಎಸ್‌ಬಿಐ ವಿರುದ್ಧ ಕಿಡಿಕಾರಿದ ನ್ಯಾಯಾಧೀಶರು, ನೀವು ನ್ಯಾಯಾಂಗ ನಿಂದನೆ ಮಾಡುತ್ತಿದ್ದೀರಿ. ನಾವು ಇಂದು ನೀಡುತ್ತಿರುವ ಆದೇಶವನ್ನೂ ಪಾಲಿಸದೇ ಹೋದಲ್ಲಿ, ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು. ನಾವು ಈಗಲೇ ಅಂಥ ಕ್ರಮವನ್ನೇನು ತೆಗೆದುಕೊಳ್ಳುತ್ತಿಲ್ಲ. ಆದರೆ ಉದ್ದೇಶಪೂರ್ವಕವಾಗಿ ನಮ್ಮ ಆದೇಶವನ್ನು ಪಾಲಿಸದೇ ಹೋದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಸ್‌ಬಿಐ ಗೆ ನೇರವಾಗಿ ಎಚ್ಚರಿಕೆ ನೀಡಿದೆ.

LEAVE A REPLY

Please enter your comment!
Please enter your name here