ಮಂಗಳೂರು(ತುಮಕೂರು): ಬಾಯಾರಿಕೆ ಎಂದು ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಯೊಳಗೆ ಬಂದ ಖದೀಮರು ಗನ್ ತೋರಿಸಿ ಮೂರು ಲಕ್ಷ ಹಣ ದೋಚಿ ಪರಾರಿಯಾಗಿರುವ ಘಟನೆ ಮಾ.27ರಂದು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಊರ್ಕಿಹಳ್ಳಿ ಬಳಿ ನಡೆದಿದೆ.
ಇನ್ನು ಖದೀಮರು ಮೂರು ಬಾರಿ ಗುಂಡು ಹಾರಿಸಿದ್ದು ಘಟನೆಯಲ್ಲಿ ಮನೆ ಮಾಲೀಕನಿಗೆ ಗಾಯಗಳಾಗಿವೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಲ್ಲಿದ್ದ ಮಹಿಳೆ ನೀರು ತರಲು ಒಳಗೆ ಹೋದಾಗ ಖದೀಮರು ಕಳ್ಳತನಕ್ಕೆ ಮುಂದಾಗಿದ್ದಾರೆ. ಈ ವೇಳೆ ಮನೆಯಲ್ಲಿ ಕಳ್ಳತನ ನಡೆಯುತ್ತಿರುವುದು ತಿಳಿಯುತ್ತಿದ್ದಂತೆ ಮನೆಯಲ್ಲಿದ್ದವರು ಕೂಗಾಡಿದ್ದಾರೆ. ಆಗ ಗನ್ ತೋರಿಸಿ ಕೂಗಾಡಿದ್ರೆ ಶೂಟ್ ಮಾಡುವುದಾಗಿ ಬೆದರಿಸಿ ಮನೆ ದೋಚಿದ್ದಾರೆ. ಖದೀಮರು ಮನೆಯ ಬ್ಯಾಗ್ನಲ್ಲಿದ್ದ ಮೂರು ಲಕ್ಷ ಹಣ ದೋಚಿದ್ದಾರೆ. ಅಲ್ಲದೆ ಮೂರು ಬಾರಿ ಫೈರಿಂಗ್ ಕೂಡ ಮಾಡಿದ್ದಾರೆ. ಈ ಹಿನ್ನೆಲೆ ಮನೆಯ ಮಾಲೀಕನ ಬಲಗಾಲಿಗೆ ಗಾಯಗಳಾಗಿವೆ. ಬೈಕಿನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳಿಂದ ಕಳ್ಳತನ ನಡೆದಿದೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.