ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ವೀರಶೈವ ಲಿಂಗಾಯತ ಸ್ವಾಮೀಜಿಗಳ ಸಭೆ – ಪ್ರಲ್ಹಾದ್ ಜೋಶಿ ವಿರುದ್ಧ ಗಂಭೀರ ಆರೋಪ-ಜೋಶಿ ಕೆಳಗಿಳಿಸುವ ಬಗ್ಗೆ ನಿರ್ಣಯ

ಮಂಗಳೂರು(ಹುಬ್ಬಳ್ಳಿ): ಫಕೀರ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಇಂದು ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ವೀರಶೈವ ಲಿಂಗಾಯತ ಸ್ವಾಮೀಜಿಗಳ ಸಭೆ ನಡೆದಿದ್ದು, ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಸಭೆಯ ಬಳಿಕ ದಿಂಗಾಲೇಶ್ವರ ಸ್ವಾಮೀಜಿ ಮಠಾಧೀಶರ ಸಭೆಯಲ್ಲಿ ಚರ್ಚಿಸಿ ಐದು ಸ್ಪಷ್ಟವಾದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿಗಳಿಗೆ ಲೋಕಸಭಾ ಚುನಾವಣೆಗೆ ಕ್ಷೇತ್ರ ಬದಲಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಕ್ಷೇತ್ರ ಬದಲಾವಣೆ ಮಾಡಬೇಕು. ಲಿಂಗಾಯತರ ಕ್ಷೇತ್ರದಲ್ಲಿ ಬ್ರಾಹ್ಮಣರು ಅನಿವಾರ್ಯವಾದರೆ, ಬ್ರಾಹ್ಮಣರು ಪ್ರಭಲವಾಗಿರುವ ಕ್ಷೇತ್ರದಲ್ಲಿ ಲಿಂಗಾಯತರನ್ನು ನಿಲ್ಲಿಸಿ ಗೆಲ್ಲಿಸಬೇಕು. ಪ್ರಲ್ಹಾದ್ ಜೋಶಿಯವರು ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಅವರಿಂದಾಗಿ ಬೇರೆ ಬೇರೆ ವರ್ಗದ ಜನರು ತುಳಿತಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿರುವ ಸ್ವಾಮೀಜಿ ಈ ಕುರಿತು ಸ್ವಾಮೀಜಿಗಳ ನಿಯೋಗದಿಂದ ಬಿಜೆಪಿ ವರಿಷ್ಠರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಪ್ರಲ್ಲಾದ ಜೋಶಿ, ಐಟಿ, ಇಡಿ ಬೆದರಿಕೆ ಹಾಕಿ ದಾಸ್ಯತ್ವಕ್ಕೆ ದಾರಿ ಮಾಡಿದ್ದಾರೆ. ಹಿಂಬಾಲಕರ ಮೂಲಕ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಸಂಸದರಿಗೆ ಫೋನ್ ಮಾಡಿದರೆ ಲಿಂಗಾಯತ ಮುಖಂಡರಿಗೆ ಫೋನ್ ಮಾಡಿ ಅಂತಾರೆ. ಪ್ರಲ್ಹಾದ್ ಜೋಶಿಯವರ ಸಹೋದರ ಗೋವಿಂದ ಜೋಶಿಯವರು ನನ್ನ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಲ್ಹಾದ್ ಜೋಶಿಯವರು ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ತೋರಿಸಿದ್ದಾರೆ. ಮಗಳ ಮದುವೆ ಕಾರ್ಯಕ್ರಮದಲ್ಲಿ ಅವಮಾನಿಸಿ ಕಳಿಸಿದ್ದಾರೆ. ಹಣ, ಅಧಿಕಾರದ ಮದದಿಂದ ಮೆರೆಯುತ್ತಿರುವ ಅವರನ್ನು ಕೆಳಗೆ ಇಳಿಸಬೇಕು ಅನ್ನೋ ನಿರ್ಣಯಕ್ಕೆ ಬಂದಿರುವ ಮಠಾಧೀಶರು ಯಾವ ಪಕ್ಷದ ವಿರೋಧಿಗಳೂ ಅಲ್ಲ, ಅಭಿಮಾನಿಗಳೂ ಅಲ್ಲ ಎಂದು ಹೇಳಿದ್ದಾರೆ.

ಪ್ರಲ್ಹಾದ್ ಜೋಶಿಯ ವ್ಯಕ್ತಿತ್ವದ ಕಾರಣ ಅವರನ್ನು ಕೆಳಗೆ ಇಳಿಸುವ ತೀರ್ಮಾನಕ್ಕೆ ಬಂದಿದ್ದೇವೆ. ಪ್ರಲ್ಹಾದ್ ಜೋಶಿಯವರನ್ನು ಮಾರ್ಚ್ 31ರೊಳಗೆ ಬೇರೆ ಕ್ಷೇತ್ರಕ್ಕೆ ಕಳಿಸಬೇಕು. ಮಾ.31ರೊಳಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು  ಬಿಜೆಪಿ ಹೈಕಮಾಂಡ್ ಗೆ ಗಡುವು ನೀಡಿರುವ ಸ್ವಾಮೀಜಿ ತಪ್ಪಿದಲ್ಲಿ ಎಪ್ರಿಲ್ 2ರಂದು ಮತ್ತೆ ಸಭೆ ಸೇರಿ ನಮ್ಮದೇ ಆದ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ. ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದು ಪ್ರಲ್ಹಾದ್ ಜೋಶಿ. ತಾವೇ ಸಿಎಂ ಆಗಬೇಕೆಂದು ಪ್ರಲ್ಹಾದ್ ಜೋಶಿ ಜಾಕೆಟ್ ಹೊಲಿಸಿದ್ರು. ನಮ್ಮ ಹೋರಾಟದಿಂದಾಗಿ ಅವರ ಜಾಕೆಟ್ ಪಾಕೆಟ್ ಸೇರಿತು. ನಾವು ಯಾರ ಒತ್ತಡಕ್ಕೂ ಒಳಗಾಗುವ ಸ್ವಾಮೀಜಿಗಳಲ್ಲ. ಎರಡನೆಯ ತಾರೀಖಿನ ನಂತರ ಕಾಯ್ದು ನೋಡಿ ಎಂದು ಹೇಳಿದ್ದಾರೆ. ಸಭೆಯ ನಿರ್ಣಯ ಹೇಳುತ್ತಿದ್ದಂತೆ ಉಳಿದ ಸ್ವಾಮೀಜಿಗಳು ಕೈ ಎತ್ತಿ‌ ದಿಂಗಾಲೇಶ್ವರ ಸ್ವಾಮೀಜಿಗೆ ಬೆಂಬಲ‌ ಸೂಚಿಸಿದ್ದಾರೆ.

ಜಗದೀಶ್‌ ಶೆಟ್ಟರ್‌ ಪರವಾಗಿ ಪ್ರಚಾರಕ್ಕಾಗಿ ಬೆಳಗಾವಿಗೆ ಆಗಮಿಸಿರುವ ಯಡಿಯೂರಪ್ಪ ಅವರು ಹುಬ್ಬಳ್ಳಿಯಲ್ಲಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಮಠಾಧೀಶರ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಮಾಹಿತಿ ಪಡೆದು ಇಂದು ಸಂಜೆ ಹುಬ್ಬಳ್ಳಿಯಲ್ಲಿ ಪಕ್ಷದ ಮುಖಂಡರೊಡನೆ ಸಮಾಲೋಚನೆ ನಡೆಸಿ ಜೋಶಿ ವಿರುದ್ಧ ಗಂಭೀರ ಆರೋಪ ಮಾಡಿರುವ ದಿಂಗಾಲೇಶ್ವರ ಸ್ವಾಮೀಜಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here