ಮಂಗಳೂರು (ಬೆಂಗಳೂರು) : ನಗರದ ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಬಂಧನಕ್ಕೆ ಸಹಕಾರಿಯಾಗುವಂತಹ ಸುಳಿವು ನೀಡಿದವರಿಗೆ ತಲಾ 10 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ ಘೋಷಿಸಿದೆ.
ಪ್ರಮುಖ ಆರೋಪಿಗಳಾದ ಮುಸ್ಸಾವೀರ್ ಹುಸೇನ್ ಶಾಜಿಬ್ (30) ಹಾಗೂ ಅಬ್ದುಲ್ ಮತೀನ್ ಅಹಮದ್ ತಾಹ (30) ಪತ್ತೆಗೆ ಸಹಕಾರಿಯಾಗಬಲ್ಲ ಸುಳಿವಿದ್ದಲ್ಲಿ ಹಂಚಿಕೊಳ್ಳುವಂತೆ ಎನ್ಐಎ ಕೋರಿದೆ. ಪ್ರಕರಣದ ತನಿಖೆ ಆರಂಭಿಸಿರುವ ಎನ್ಐಎ ಅಧಿಕಾರಿಗಳು ಈಗಾಗಲೇ ಮುಜಾಮಿಲ್ ಷರೀಫ್ ಎಂಬಾತನನ್ನ ಬಂಧಿಸಿದ್ದಾರೆ.
1. ಮುಸ್ಸಾವೀರ್ ಹುಸೇನ್ ಶಾಜಿಬ್ (30) ವಿವರ ಹೀಗಿದೆ..
ಫೇರ್ ಮೈಬಣ್ಣ, 6.2 ಫೀಟ್ ಎತ್ತರ, ಕಪ್ಪು ವರ್ಣದ ನೇರ ಹೇರ್ ಸ್ಟೈಲ್, ಮೊಹಮ್ಮದ್ ಜುನೇದ್ ಸಯ್ಯದ್ ಅಥವಾ ಇನ್ನಿತರ ಹೆಸರಿನಲ್ಲಿ ನಕಲಿ ವಾಹನ ಚಾಲನ ಪರವಾನಗಿ ಹೊಂದಿದ್ದಾನೆ.
ಜೀನ್ಸ್, ಟೀ ಶರ್ಟ್ & ಶರ್ಟ್ ಧರಿಸುತ್ತಾನೆ. ಕೈಯಲ್ಲಿ ಬ್ಲ್ಯಾಕ್ ಸ್ಮಾರ್ಟ್ ವಾಚ್ ಧರಿಸಿರುತ್ತಾನೆ, ಆಗಾಗ ಮಾಸ್ಕ್ ಧರಿಸುತ್ತಾನೆ. ಕೆಲವೊಮ್ಮೆ ವಿಗ್ ಮತ್ತು ನಕಲಿ ಗಡ್ಡಧಾರಿಯಾಗಿರುತ್ತಾನೆ. ಪುರುಷರ ಪಿಜಿ, ಕಡಿಮೆ ದರದ ಹೋಟೆಲ್ ಲಾಡ್ಜ್ಗಳಲ್ಲಿ ವಾಸಿಸುತ್ತಿರಬಹುದು.
2. ಅಬ್ದುಲ್ ಮತೀನ್ ಅಹಮದ್ ತಾಹ (30) ವಿವರ ಹೀಗಿದೆ..
ಬಿಳಿ ಮೈ ಬಣ್ಣ, 5.5 ಫೀಟ್ ಎತ್ತರ, ತಲೆಯ ಮುಂದೆ ಕೂದಲಿಲ್ಲ, ಹಿಂದೆ ಮತ್ತು ಬದಿಯಲ್ಲಿ ಮಧ್ಯಮ ಪ್ರಮಾಣದಲ್ಲಿ ಕೂದಲುಗಳಿವೆ, ಕ್ಯಾಪ್ ಧರಿಸುತ್ತಾನೆ. ವಿಘ್ನೇಶ್ ಎಂಬ ಹೆಸರಿನ ಆಧಾರ್ ಸೇರಿದಂತೆ ಇತರ ದಾಖಲೆಗಳನ್ನ ಹೊಂದಿದ್ದು, ಹಿಂದೂ ಎಂಬಂತೆ ಬಿಂಬಿಸಿಕೊಂಡಿರುತ್ತಾನೆ.
ಜೀನ್ಸ್, ಟೀ ಶರ್ಟ್ & ಶರ್ಟ್, ಕ್ಯಾಪ್ಡ್ ಹುಡ್ಡೀಸ್ ಧರಿಸುತ್ತಾನೆ. ಕೆಲವೊಮ್ಮೆ ಮಾಸ್ಕ್, ವಿಗ್ ಮತ್ತು ನಕಲಿ ಗಡ್ಡಧಾರಿಯಾಗಿರುತ್ತಾನೆ. ಪುರುಷರ ಪಿಜಿ, ಕಡಿಮೆ ದರದ ಹೋಟೆಲ್ ಲಾಡ್ಜ್ಗಳಲ್ಲಿ ವಾಸಿಸುತ್ತಿರಬಹುದು.
ಆರೋಪಿಗಳ ಕುರಿತು ಯಾವುದೇ ಸುಳಿವಿದ್ದಲ್ಲಿ ಹಂಚಿಕೊಳ್ಳುವಂತೆ ಹಾಗೂ ಮಾಹಿತಿ ನೀಡಿದವರ ವಿವರಗಳನ್ನ ಗೌಪ್ಯವಾಗಿರಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.