ಮತದಾನ ಹೆಚ್ಚಳಕ್ಕೆ ಕ್ರಮ-72 ಮತಗಟ್ಟೆಗಳಲ್ಲಿ ಮನೆಗಳಿಗೆ ಭೇಟಿ-ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ 72 ಮತಗಟ್ಟೆಗಳಲ್ಲಿ ಕಳೆದ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿದ್ದು, ಈ ಮತಗಟ್ಟೆಗಳ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತದೆ ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಹೇಳಿದ್ದಾರೆ.

ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಡಿಮೆ ಮತದಾನ ನಡೆದಿರುವ ಮತಗಟ್ಟೆಗಳ ವ್ಯಾಪ್ತಿಯ ಪ್ರತಿ ಮನೆಗೆ ನಮ್ಮ ಸಿಬ್ಬಂದಿ ತಂಡದಲ್ಲಿ ಹೋಗಿ, ಚುನಾವಣೆಯ ಮಾಹಿತಿ ಕೈಪಿಡಿ, ಮತದಾರರ ಪಟ್ಟಿಯ ಸ್ಲಿಪ್ ನೀಡುವ ಜೊತೆಗೆ ಐದು ನಿಮಿಷ ಅವರೊಂದಿಗೆ ಚರ್ಚಿಸಿ, ಮತದಾನದ ಮಹತ್ವವನ್ನು ತಿಳಿಸುತ್ತಾರೆ. ಏ.21ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ನಡೆ ಮತಗಟ್ಟೆಗಳ ಕಡೆಗೆ ಕಾರ್ಯಕ್ರಮ ನಡೆಸಿ, ಎಲ್ಲಾ ಬೂತ್‌ಗಳಲ್ಲಿ ಚುನಾವಣಾ ಧ್ವಜ ಹಾರಿಸಿ, ಅರಿವು ಮೂಡಿಸಲಾಗುವುದು. ಈ ಧ್ವಜದಲ್ಲಿ ಚುನಾವಣೆಯ ದಿನಾಂಕ ಮತ್ತು ಸಮಯ ನಮೂದಿಸಲಾಗುತ್ತದೆ ಎಂದು ಹೇಳಿದ್ದಾರೆ.

ವಲಸೆ, ವಿದೇಶಕ್ಕೆ ಹೋಗಿರುವ ಕಾರಣ, ನಿಧನರಾಗಿದ್ದರೂ ಹೆಸರು ಕಡಿತ ಆಗದಿರುವುದು ನಗರ ಪ್ರದೇಶದ ಕೆಲವು ಮತಗಟ್ಟೆಗಳಲ್ಲಿ ಮತದಾನ ಕಡಿಮೆಯಾಗಲು ಕಾರಣವಾಗಿದೆ. ಸರದಿಯಲ್ಲಿ ನಿಂತು ಮತ ಚಲಾಯಿಸಬೇಕು ಎಂಬ ಕಾರಣಕ್ಕೆ ಇನ್ನು ಕೆಲವರು ಮತದಾನದತ್ತ ನಿರಾಸಕ್ತರಾಗುತ್ತಾರೆ. ಈ ಬಾರಿ ಮತ ಕೇಂದ್ರದ ಪಕ್ಕದಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಲಾಗುತ್ತದೆ. ಉದ್ದದ ಸರದಿ ಇದ್ದಲ್ಲಿ ಅಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು’ ಎಂದು ಹೇಳಿದ್ದಾರೆ. ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಭಿನ್ನ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ. ನಿರಂತರ ಕಾರ್ಯಕ್ರಮದಿಂದ ವಿಶೇಷವಾಗಿ ಯುವಜನರಲ್ಲಿ ಮತದಾನದ ಅರಿವು ಮೂಡಿಸಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಎಲ್, ಮಹಾನಗರ ಪಾಲಿಕೆ ಆಯುಕ್ತ ಆನಂದ್, ರಾಜ್ಯ ಮಟ್ಟದ ತರಬೇತುದಾರ್ತಿ ಪ್ರಮೀಳಾ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here