ಮಂಗಳೂರು(ಮುಂಬೈ): ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃಣಾಲ್ ಪಾಂಡ್ಯ ಅವರಿಗೆ ಪಾಲಿಮರ್ ಉದ್ಯಮದಲ್ಲಿ ನಾಲ್ಕು ಕೋಟಿಗೂ ಹೆಚ್ಚು ವಂಚನೆ ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು, ಮಲಸಹೋದರನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
37 ವರ್ಷದ ವೈಭವ್ ಪಾಂಡ್ಯ ಅವರನ್ನು ಆರ್ಥಿಕ ಅಪರಾಧಗಳ ವಿಭಾಗ ಬಂಧಿಸಿದೆ. ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ, ಕ್ರಿಮಿನಲ್ ಬೆದರಿಕೆ, ಕ್ರಿಮಿನಲ್ ಪಿತೂರಿ, ಫೋರ್ಜರಿ ಮತ್ತು ಇತರೆ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 2021ರಲ್ಲಿ ಪಾಂಡ್ಯ ಸಹೋದರರು ಹಾಗೂ ಮಲಸಹೋದರ ಸೇರಿಕೊಂಡು ಪಾಲಿಮರ್ ಉದ್ಯಮವನ್ನು ಪ್ರಾರಂಭಿಸಿದ್ದರು. ಇದರಲ್ಲಿ ಪಾಂಡ್ಯ ಸಹೋದರರು ತಲಾ ಶೇ 40 ಮತ್ತು ವೈಭವ್ ಶೇ 20 ಬಂಡವಾಳ ಹೂಡಿದ್ದರು. ದೈನಂದಿನ ವ್ಯವಹಾರದ ನಿರ್ವಹಣೆಯನ್ನು ವೈಭವ್ಗೆ ವಹಿಸಲಾಗಿತ್ತು. ಅಲ್ಲದೆ ಲಾಭವನ್ನು ಅದೇ ಅನುಪಾತದಲ್ಲಿ ಹಂಚಲು ನಿರ್ಧರಿಸಲಾಗಿತ್ತು’ ಎಂದು ಅಧಿಕಾರಿ ತಿಳಿಸಿದ್ದಾರೆ. ಆದರೆ ಪಾಂಡ್ಯ ಸಹೋದರರಿಗೆ ತಿಳಿಸದೇ ವೈಭವ್ ಅವರು ಅದೇ ವ್ಯವಹಾರದಲ್ಲಿ ಮತ್ತೊಂದು ಸಂಸ್ಥೆಯನ್ನು ಸೇರಿಸಿದ್ದರು. ಆ ಮೂಲಕ ಪಾಲುದಾರಿಕೆ ಒಪ್ಪಂದ ಮುರಿದಿದ್ದಾರೆ ಎಂದು ಅವರು ಹೇಳಿದ್ದಾರೆ.