ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ-ಬಾಂಬ್ ಇಟ್ಟಿದ್ದ ಮುಸಾವೀರ್, ಅಬ್ದುಲ್ ಮಥೀನ್ ಎನ್ಐಎ ವಶಕ್ಕೆ

ಮಂಗಳೂರು(ಬೆಂಗಳೂರು): ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಮುಖ ‌ಶಂಕಿತರಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ತಾಹಾನನ್ನು ಪಶ್ಚಿಮ ಬಂಗಾಳದಲ್ಲಿ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ತೀರ್ಥಹಳ್ಳಿಯ ಮುಸಾವೀರ್, ಅಬ್ದುಲ್ ತಾಹಾ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದರು. ಕರ್ನಾಟಕದಿಂದ ಪಶ್ಚಿಮ ಬಂಗಾಳಕ್ಕೆ‌ ಹೋಗಿದ್ದರು. ಈ ಬಗ್ಗೆ ಮಾಹಿತಿ ಪಡೆದಿದ್ದ ಅಧಿಕಾರಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಶಂಕಿತರನ್ನು ವಶಕ್ಕೆ ಪಡೆದಿದೆ. ಇದೇ ಪ್ರಕರಣದಲ್ಲಿ‌ ಈಗಾಗಲೇ ಮುಜಮೀಲ್ ಹಾಗೂ ಮಾಝ್ ಮುನೀರ್‌ನನ್ನು ಎನ್ಐಎ ಅಧಿಕಾರಿಗಳು ‌ಬಂಧಿಸಿದ್ದಾರೆ. ಬಾಂಬ್ ಇಟ್ಟಿದ್ದ‌ ಮುಸಾವೀರ್ ಶಾಜೀಬ್ ಹಾಗೂ ಸಂಚು ರೂಪಿಸಿದ್ದ ಅಬ್ದುಲ್‌ ಮಥೀನ್ ತಾಹಾನನ್ನು ವಶಕ್ಕೆ ಪಡೆಯಲಾಗಿದ್ದು, ಬೆಂಗಳೂರಿಗೆ ಕರೆತರಲಾಗುತ್ತಿದೆ. ವಿಚಾರಣೆ ನಡೆಸಿ ಮತ್ತಷ್ಟು ಮಾಹಿತಿ ಕಲೆಹಾಕಬೇಕಿದೆ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ‌. ಸ್ಫೋಟ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಬಂಧನಕ್ಕೆ ಸಹಕಾರಿಯಾಗುವ ಮಾಹಿತಿ ನೀಡಿದವರಿಗೆ ತಲಾ ₹10 ಲಕ್ಷ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಘೋಷಿಸಿತ್ತು.

LEAVE A REPLY

Please enter your comment!
Please enter your name here