ಮಂಗಳೂರು(ಕೇರಳ): ಆತನ ಹೆಸರು ಅಬ್ದುಲ್ ರಹೀಂ. ತನ್ನ 26ನೇ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿಯನ್ನು ಹೆಗಲೇರಿಸಿ 2006ರಲ್ಲಿ ಕೇರಳದ ಕೊಯಿಕ್ಕೋಡ್ ಜಿಲ್ಲೆಯ ಫರೂಕ್ ನ ಕೊಡಂಪುಳ ನಿವಾಸಿ ಮಚ್ಚಿಲ ಕತ್ ನ ದಿ.ಮಹಮ್ಮದ್ ಕುಟ್ಟಿ ಅವರ ಪುತ್ರ ಅಬ್ದುಲ್ ರಹೀಂ ಉದ್ಯೋಗ ಅರಸಿ ಸೌದಿ ಅರೇಬಿಯಾದ ರಿಯಾದ್ ಗೆ ಪ್ರಯಾಣಿಸುತ್ತಾನೆ. ಅಲ್ಲಿ ತನ್ನ ಸೌದಿ ಮಾಲೀಕನ ವಿಶೇಷಚೇತನ ಪುತ್ರನ ಕೇರ್‌ಟೇಕರ್ ಕಾರು ಚಾಲಕನಾಗಿ ಕೆಲಸಕ್ಕೆ ನೇಮಕಗೊಳ್ಳುತ್ತಾನೆ. ವಿಕಲಚೇತನನಾಗಿದ್ದ ಸೌದಿ ಬಾಲಕ ಬುದ್ದಿ ಮಾಂದ್ಯನೂ ಆಗಿದ್ದ. ಬಾಯಿಯಿಂದ ಆಹಾರ ಸೇವಿಸಲಾರದ ಈ ಸೌದಿ ಹುಡುಗನಿಗೆ ಆಹಾರ ಸೇವಿಸಲಿಕ್ಕಾಗಿ ವಿಶೇಷ ಉಪಕರಣವನ್ನು ಕುತ್ತಿಗೆಗೆ ಅಳವಡಿಸಲಾಗಿತ್ತು.
ಒಂದು ದಿನ ತನ್ನ ಮಾಲೀಕನ ಕಾರಿನಲ್ಲಿ ರಹೀಂ ಈ ಬಾಲಕನನ್ನು ಶಾಪಿಂಗ್ ಮಾಲ್ ಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಟ್ರಾಫಿಕ್ ಸಿಗ್ನಲ್ ನಲ್ಲಿ ಕಾರು ನಿಲ್ಲಿಸಿದಾಗ ಕೋಪಗೊಂಡ ಸೌದಿ ಬಾಲಕ ವಾಹನ ಚಲಾಯಿಸುವಂತೆ ಹೇಳಿ ಚಾಲಕ ರಹೀಂನ ಮುಖಕ್ಕೆ ಉಗುಳುತ್ತಾನೆ. ಬಾಲಕನ ಎಂಜಲು ತನ್ನ ಮೇಲೆ ಬೀಳದಂತೆ ತಡೆಯುವ ಪ್ರಯತ್ನದಲ್ಲಿ ರಹೀಂನ ಕೈಯು ಬಾಲಕನ ಕುತ್ತಿಗೆಯ ಆಹಾರ ಸೇವಿಸುವ ಸಾಧನಕ್ಕೆ ತಾಗಿ ಅದು ಒಡೆದುಹೋಗುತ್ತದೆ. ಇದರಿಂದಾಗಿ ತೀವೃ ಅಸ್ವಸ್ಥಗೊಂಡು ಸೌದಿ ಬಾಲಕ ಮೃತಪಡುತ್ತಾನೆ.
ವಿಷಯ ತಿಳಿದು ಪೊಲೀಸರು ರಹೀಂನನ್ನು ಬಂಧಿಸುತ್ತಾರೆ. ಸರಿಸುಮಾರು 18 ವರ್ಷ ಜೈಲಿನಲ್ಲಿ ಕಳೆದ ರಹೀಂನಿಗೆ ಸೌದಿ ಅರೇಬಿಯಾದ ಸುಪ್ರೀಂ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿದೆ. ಸೌದಿ ಅರೇಬಿಯಾದ ಕಾನೂನಿನ ಪ್ರಕಾರ ಮೃತ ಬಾಲಕನ ಹೆತ್ತವರು ಕ್ಷಮಾಧಾನ ನೀಡಿದರೆ ಮಾತ್ರ ರಹೀಂನನ್ನು ಗಲ್ಲು ಶಿಕ್ಷೆಯಿಂದ ರಕ್ಷಿಸಬಹುದು. ಆದರೆ ಕ್ಷಮೆ ನೀಡಲು ಬಾಲಕನ ಹೆತ್ತವರು ನಿರಾಕರಿಸಿದ್ದು, ಬಾಲಕನ ಸಾವಿಗೆ ರಹೀಂ ಕಾರಣನಾಗಿದ್ದು, ಆತನಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಸುಪ್ರೀಂ ಕೋರ್ಟಿಗೆ ಮನವಿ ಮಾಡುತ್ತಾರೆ. ಆದರೆ ಸೌದಿಯಲ್ಲಿರುವ ಸಾಮಾಜಿಕ ಕಾರ್ಯಕರ್ತರ ಸತತ ಪ್ರಯತ್ನದ ಫಲವಾಗಿ ಮೃತ ಬಾಲಕನ ಹೆತ್ತವರು ಕ್ಷಮಾದಾನ ನೀಡಲು ಮುಂದಾಗಿದ್ದಾರೆ. ಇದಕ್ಕಾಗಿ ಬಾಲಕನ ಹೆತ್ತವರು 34 ಕೋಟಿ ರೂಪಾಯಿ ಪರಿಹಾರವನ್ನು ಕೇಳಿದ್ದಾರೆ. ಭಾರತದ ರಾಯಭಾರಿ ಕಚೇರಿ ಮತ್ತು ವಿದೇಶದಲ್ಲಿರುವ ಕೇರಳದ ಅನೇಕ ಸಂಘಟನೆಗಳು ಈ ಮೊತ್ತವನ್ನು ಭರಿಸಲು ಹಣ ಸಂಗ್ರಹಕ್ಕೆ ಮುಂದಾಗಿದೆ. ಕನಿಷ್ಠ ದಿನಗಳಲ್ಲಿ 34 ಕೋಟಿ ರೂ ಹಣ ಸಂಗ್ರಹವಾಗಿದ್ದು, ರಹೀಂ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.
ಜಾತಿ, ಮತ, ಪಂಥವನ್ನು ಲೆಕ್ಕಿಸದೆ ಇಡೀ ಕೇರಳ ಕೈಗೊಂಡ ಅಭಿಯಾನವು ನಿಗಧಿತ ಸಮಯಕ್ಕಿಂತ ಮುಂಚಿತವಾಗಿ ಯಶಸ್ವಿಯಾಗಿದೆ. ಚೆಮ್ಮನ್ನೂರು ಗೋಲ್ಡ್ ಮಾಲೀಕ ಬಾಬಿ ಚೆಮ್ಮನ್ನೂರು ಸೇರಿದಂತೆ ಸಾವಿರಾರು ಹಿತೈಷಿಗಳ ಈ ಮಹಾನ್ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಕೇರಳ ರಾಜ್ಯವೊಂದರಲ್ಲಿ ಈ ಅಭಿಯಾನದಲ್ಲಿ 23,66,81,771 ರೂ ಸಂಗ್ರಹವಾಗಿದೆ. ಉಳಿದಂರೆ ಕರ್ನಾಟಕದಲ್ಲಿ 28,90,943 ರೂ, ತಮಿಳುನಾಡಿನಲ್ಲಿ 13,75,150 ರೂ, ಲಕ್ಷದ್ವೀಪದಲ್ಲಿ 8,07,702 ರೂ, ಅಂಡಮಾನ್ ನಿಕೋಬಾರ್ ನಲ್ಲಿ 2,46,687ರೂ, ಮಹಾರಾಷ್ಟ್ರದಲ್ಲಿ 2,37,318 ರೂ, ಗುಜರಾತ್ ನಲ್ಲಿ 2,24,737 ರೂ ಮತ್ತು ಇನ್ನಿತರ ಮೂಲಗಳಿಂದ 1,08,24,551 ರೂ ಸಂಗ್ರಹವಾಗಿದ್ದು, ಭಾರತದ ವಿದೇಶಾಂಗ ಸಚಿವಾಲಯದ ಮೂಲಕ ರಿಯಾದ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಹಸ್ತಾಂತರಿಸಲಾಗುವುದು. ಮಾಡದ ಅಪರಾಧಕ್ಕಾಗಿ ಸೌದಿ ಜೈಲಿನಲ್ಲಿ ಮರಣದಂಡನೆಗೆ ಒಳಗಾಗಿರುವ ಮಗನ ಬಿಡುಗಡೆಗಾಗಿ ಕೈಜೋಡಿಸಿದ ಹಿತೈಷಿಗಳಿಗೆ ರಹೀಮ್ ತಾಯಿ ಪಾತು ಧನ್ಯವಾದ ಅರ್ಪಿಸಿದ್ದಾರೆ. ಕಳೆದ 18 ವರ್ಷಗಳಿಂದ ಸರ್ವಶಕ್ತನ ಮುಂದೆ ಕಣ್ಣೀರಿಟ್ಟು ಮಗನ ವಿಮೋಚನೆಗಾಗಿ ಪ್ರಾರ್ಥಿಸುತ್ತಿದ್ದ ಪಾತು ಕಣ್ಣಲ್ಲಿ ಆನಂದಭಾಷ್ಪ ಹರಿಯದೆ ಉಳಿಯಲಿಲ್ಲ.