ಮಂಗಳೂರು(ಮುಂಬೈ): ಇಬ್ಬರು ಅಪರಿಚಿತ ವ್ಯಕ್ತಿಗಳು ಸಲ್ಮಾನ್ ಖಾನ್ ಮನೆಯ ಎದುರು ಗುಂಡಿನ ದಾಳಿ ನಡೆಸಿದ್ದಾರೆ. ಭಾನುವಾರ (ಏಪ್ರಿಲ್ 14) ಮುಂಜಾನೆ ಈ ಘಟನೆ ನಡೆದಿದೆ. ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಎದುರು ಬೆಳಗ್ಗೆ 5 ಗಂಟೆ ಸುಮಾರಿಗೆ ಗುಂಡಿನ ಸದ್ದು ಕೇಳಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಕಿಡಿಗೇಡಿಗಳು ಮೂರು ಬಾರಿ ಗುಂಡು ಹಾರಿಸಿದ್ದಾರೆ. ಸಲ್ಮಾನ್ ಖಾನ್ ಮನೆಗೆ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ದೌಡಾಯಿಸಿದ್ದು, ಸ್ಥಳ ಪರಿಶೀಲನೆಯ ಕಾರ್ಯ ನಡೆದಿದೆ. ಗುಂಡಿನ ದಾಳಿ ನಡೆಸಿದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಈ ಘಟನೆಯ ಸುದ್ದಿ ಕೇಳಿ ಸಲ್ಮಾನ್ ಖಾನ್ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವುದಾಗಿ ಲಾರೆಯ್ಸ್ ಬಿಷ್ಣೋಯ್ ಬೆದರಿಕೆ ಹಿನ್ನಲೆಯಲ್ಲಿ ಸಲ್ಮಾನ್ ಖಾನ್ ಭದ್ರತೆ ಹೆಚ್ಚಿಸಿಕೊಂಡಿದ್ದರು. ಈಗ ಗುಂಡಿನ ದಾಳಿ ಬಳಿಕ ಇನ್ನಷ್ಟು ಭಯದ ವಾತಾವರಣ ನಿರ್ಮಾಣವಾಗಿದ್ದು, ಇದು ಯಾರ ಕೃತ್ಯ ಎಂಬುದು ಇನ್ನೂ ತಿಳಿದುಬಂದಿಲ್ಲ. ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ಸಲ್ಮಾನ್ ಖಾನ್ ಅವರ ಮನೆಯ ಎದುರು ತನಿಖೆ ಆರಂಭಿಸಿದ್ದಾರೆ.
ಪೊಲೀಸರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಸಲ್ಲು ಮನೆಯ ಸುತ್ತಮುತ್ತಲಿನ ಇಂಚಿಂಚೂ ಜಾಗವನ್ನು ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ. ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಈ ಘಟನೆ ಬಗ್ಗೆ ಸಲ್ಮಾನ್ ಖಾನ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ಕೂಡ ಸಲ್ಮಾನ್ ಖಾನ್ ಹತ್ಯೆ ಪ್ರಯತ್ನ ನಡೆದಿತ್ತು. ಆದರೆ ಕಿಡಿಗೇಡಿಗಳ ಪ್ಲ್ಯಾನ್ ವಿಫಲವಾಗಿತ್ತು. ಗುರುವಾರ ಸಲ್ಮಾನ್ ಖಾನ್ ಸಂಭ್ರಮದಿಂದ ಈದ್ ಹಬ್ಬ ಆಚರಿಸಿದ್ದರು. ಬೆಳಗ್ಗೆಯಿಂದ ರಾತ್ರಿ ತನಕ ಮನೆ ಎದುರು ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಸಲ್ಮಾನ್ ಖಾನ್ ಮನೆಯ ಬಾಲ್ಕನಿಗೆ ಬಂದು ಎಲ್ಲರತ್ತ ಕೈ ಬೀಸಿದ್ದರು.
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರು ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಅನೇಕ ಬಾರಿ ಬೆದರಿಕೆ ಹಾಕಿದ್ದು, ಇತ್ತೀಚೆಗೆ, ಲಾರೆನ್ಸ್ ಬಿಷ್ಣೋಯ್ ಕೆನಡಾದಲ್ಲಿರುವ ನಟ-ಗಾಯಕ ಗಿಪ್ಪಿ ಗ್ರೆವಾಲ್ ಅವರ ನಿವಾಸದ ಮೇಲೂ ದಾಳಿ ನಡೆಸಿದ್ದ. 2023 ರಲ್ಲಿ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ ಕಚೇರಿಗೆ ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು. ಲಾರೆನ್ಸ್ ಬಿಷ್ಣೋಯ್ ಬೆದರಿಕೆಯ ನಂತರ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಭದ್ರತೆಯನ್ನು ಹೆಚ್ಚಿಸಿದ್ದರು. ಸದ್ಯ ಸಲ್ಮಾನ್ ಗೆ ವೈ ಪ್ಲಸ್ ಭದ್ರತೆ ನೀಡಲಾಗಿದೆ. ಈಗ ನಾನು ಗೂಂಡಾ ಅಲ್ಲ, ಆದರೆ ಸಲ್ಮಾನ್ ಖಾನ್ ಅವರನ್ನು ಕೊಂದು ಗೂಂಡಾ ಆಗುತ್ತೇನೆ. ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ನನ್ನ ಜೀವನದ ಗುರಿ. ಭದ್ರತೆ ತೆಗೆದರೆ ಸಲ್ಮಾನ್ ಖಾನ್ ಅವರನ್ನು ಕೊಲ್ಲುತ್ತೇನೆ ಎಂದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೇಳಿದ್ದ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
#WATCH | Mumbai, Maharashtra: Visuals from outside actor Salman Khan's residence in Bandra where two unidentified men opened fire this morning.
Police and forensic team present on the spot. pic.twitter.com/fVXgHzEW0J
— ANI (@ANI) April 14, 2024