ಪ್ರಧಾನಿ ರೋಡ್‌ ಶೋಗೆ ಭರ್ಜರಿ ಯಶಸ್ಸು-ಮಂಗಳೂರಿನ ಪ್ರಥಮ ಪ್ರಜೆಗೆ ಸಿಗದ ಮೋದಿ ಭೇಟಿ ಅವಕಾಶ-ಎಸ್‌ಪಿಜಿ ಅನುಮತಿ ಸಕಾಲದಲ್ಲಿ ಸಿಗದೇ ಇರುವುದೇ ಕಾರಣ ಎಂದ ಸತೀಶ್ ಕುಂಪಲ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ಭರ್ಜರಿ ಯಶಸ್ಸು ಕಂಡಿದ್ದು, ಲಕ್ಷಾಂತರ ಜನರು ತಮ್ಮ ನೆಚ್ಚಿನ ನಾಯಕನ್ನು ಹತ್ತಿರದಿಂದ ಕಂಡು ಸಂಭ್ರಮಿಸಿದರು ಎಂದು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ಪ್ರಧಾನಿ ಮೋದಿ ಅವರಿಗೆ ದ.ಕ ಜಿಲ್ಲಾ ಬಿಜೆಪಿ ಹಾಗೂ ಜನತೆಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಿಂದುತ್ವದ ಭದ್ರಕೋಟೆ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷವು ಅತ್ಯಂತ ಕ್ರಿಯಾಶೀಲವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಪ್ರಧಾನಿ ಆಗಮನದಿಂದ ಕಾರ್ಯಕರ್ತರ ಹುಮ್ಮಸ್ಸು ಮತ್ತಷ್ಟು ಹೆಚ್ಚಾಗಿದೆ. ಪ್ರಧಾನಿ ಮೋದಿ ಅವರ ರೋಡ್‌ ಶೋ ವೀಕ್ಷಿಸಲು ಪಕ್ಕದ ಜಿಲ್ಲೆಗಳಿಂದಲೂ ಜನರು ಆಗಮಿಸಿದ್ದಾರೆ. ವಿವಿಧ ಕಲಾತಂಡಗಳು ಜಿಲ್ಲೆಯ ಸಂಸ್ಕೃತಿಯ ವೈಭವವನ್ನು ಪ್ರದರ್ಶಿಸಿವೆ. ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿ ಗುರುಗಳ ಪ್ತತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಈ ದೃಶ್ಯಾವಳಿಗಳು ಇಡೀ ಜಗತ್ತಿಗೆ ತಲುಪಿವೆ ಒಟ್ಟಿನಲ್ಲಿ ಇಡೀ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿದೆ ಎಂದು ಸತೀಶ್ ಕುಂಪಲ ತಿಳಿಸಿದ್ದಾರೆ.

ದ.ಕ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಮನೆ ಮನೆ ಸಂಪರ್ಕ ಪೂರ್ಣಗೊಂಡಿದೆ. ಬೂತ್ ಮಟ್ಟದ ಸಭೆಗಳು ಮುಗಿದಿವೆ. ಎರಡನೇ ಹಂತದ ಪ್ರಚಾರ ಕಾರ್ಯ ಪ್ರಾರಂಭವಾಗಿದ್ದು 61 ಬೂತ್‌ಗಳಲ್ಲಿ ಪ್ರಗತಿಯಲ್ಲಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಏ.21ರಂದು ಬಂಟ್ವಾಳ ಹಾಗೂ ಬೆಳ್ತಂಗಡಿಗೆ ಭೇಟಿ ನೀಡಲಿದ್ದಾರೆ. 22ರಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಜಿಲ್ಲೆಗೆ ಆಗಮಿಸಿ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದು ಸತೀಶ್ ಕುಂಪಲ ಮಾಹಿತಿ ನೀಡಿದರು. ವಿವಿಧ ಮೋರ್ಚಾಗಳಿಂದ ಈಗಾಗಲೇ ಬಿರುಸಿನ ಪ್ರಚಾರ ಕಾರ್ಯ ನಡೆಯುತ್ತಿದೆ. ಏ.19ರಂದು ವಕೀಲರ ದೊಡ್ಡ ಮಟ್ಟದ ಸಭೆ ನಡೆಯಲಿದೆ. ರಾಷ್ಟ್ರೀಯ ನಾಯಕರಾದ ಗೌರವ್ ಭಾಟಿಯಾ ಈ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರು ನುಡಿದರು.

ಪ್ರಧಾನಿ ಮೋದಿ ಅವರ ರೋಡ್‌ ಶೋ ಸಂದರ್ಭ ಅವರನ್ನು ಸ್ವಾಗತಿಸಲು ಮಂಗಳೂರು ನಗರದ ಪ್ರಥಮ ಪ್ರಜೆ ಸುಧೀರ್ ಶೆಟ್ಟಿ ಕಣ್ಣೂರು ಅವರಿಗೆ ಅವಕಾಶ ಸಿಗಲಿಲ್ಲ ಯಾಕೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್‌ಪಿಜಿ ಅವರ ಅನುಮತಿ ಸಕಾಲದಲ್ಲಿ ಸಿಗದ ಕಾರಣ ಇದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಪ್ರಧಾನಿಯವರು ಆಗಮಿಸಿದ ನಂತರ ಸಂಜೆ ಎಸ್‌ಪಿಜಿ ಅನುಮತಿ ದೊರೆತರೂ ತಾಂತ್ರಿಕ ಕಾರಣಗಳಿಂದ ಈ ಮಾಹಿತಿ ಸ್ಥಳದಲ್ಲಿರುವ ಅಧಿಕಾರಿಗಳಿಗೆ ತಲುಪಲಿಲ್ಲ. ಅಲ್ಲದೆ ಇದು ರಾಜಕೀಯ ಸಮಾವೇಶ ಆಗಿರುವುದರಿಂದ ಶಿಷ್ಟಾಚಾರದ ವಿಚಾರ ಬರುವುದಿಲ್ಲ ಎಂದು ತಿಳಿಸಿದರು. ಮಧ್ಯಾಹ್ನದ ವರೆಗೆ ತಮಗೂ ಎಸ್‌ಪಿಜಿ ಅನುಮತಿ ಸಿಕ್ಕಿರಲಿಲ್ಲ. ಒಂದುವೇಳೆ ಸಿಗದೇ ಇದ್ದಿದ್ದರೆ ತಾವೂ ಹೊರಗೆಯೇ ನಿಲ್ಲಬೇಕಾಗುತ್ತಿತ್ತು ಎಂದು ಸತೀಶ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮೂಡಾ ಮಾಜಿ ಅಧ್ಯಕ್ಷ ರವಿಶಂಕರ ಮಿಜಾರು, ಲೋಕಸಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ, ಖಜಾಂಚಿಗಳಾದ ಸಂಜಯ್ ಪ್ರಭು, ಬಂಟ್ವಾಳದ ಚುನಾವಣಾ ಉಸ್ತುವಾರಿ ಜಗದೀಶ್ ಶೇಣವ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here